ಬ್ರಹ್ಮಾವರ: 8 ಲಕ್ಷ ರೂ. ಮೌಲ್ಯದ ನಿಷೇಧಿತ ಗಾಂಜಾ ಸಾಗಾಟ ಯತ್ನ – ಮೂವರ ಬಂಧನ
ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆಜಿ ರೋಡ್ ಕ್ರಾಸ್ ಬಳಿ ನಡೆದಿದೆ.
ಉಪ್ಪೂರು ನಿವಾಸಿಗಳಾದ ಸತ್ಯರಾಜ್ (32), ಕೃಷ್ಣ (43) ಹಾಗೂ ಶಕಿಲೇಶ್(25) ಬಂಧಿತ ಆರೋಪಿಗಳು. ಇವರು ಕೆಜಿ ರೋಡ್ ಕ್ರಾಸ್ ಬಳಿ ಮುಂಬೈಯಿಂದ ತರಿಸಿಕೊಂಡಿದ್ದ ಗಾಂಜಾವನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 8,11,040 ಮೌಲ್ಯದ 10 ಕೆ.ಜಿ 138 ಗ್ರಾಂ ತೂಕದ ಗಾಂಜಾ, 1,570 ನಗದು, 3 ಮೊಬೈಲ್ ಪೋನ್ ಸಹಿತ ಒಟ್ಟು 8,42,610 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.