ಆರೋಗ್ಯವಂತ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಡಾ. ಪಿ.ವಿ ಭಂಡಾರಿ

ಬ್ರಹ್ಮಾವರ, ನ.15: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ಐಕ್ಯೂಎಸಿ, ಸಮಾಜಕಾರ್ಯ ವೇದಿಕೆ, ಆಂಟಿ ಡ್ರಗ್ ಸೆಲ್ ಮತ್ತು ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಮತ್ತು ಟೀಮ್ ಅಭಿಮತ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ‘ವಾಗ್ದಾನ’ ಕಾರ್ಯಕ್ರಮ ನ. 13 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. 

ಖ್ಯಾತ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ‘ಆಧುನಿಕ ದಿನಮಾನಗಳ ವ್ಯಸನಗಳ’ ಎಂಬ ವಿಷಯದ ಕುರಿತು ಮಾತನಾಡಿದರು. ಮಾದಕ ಪದಾರ್ಥಗಳಿಂದ ದೇಹದ ಮೇಲೆ ಮತ್ತು ಸಮಾಜದ ಮೇಲಾಗುವ ಹಾನಿಗಳನ್ನು ಮನಮುಟ್ಟುವಂತೆ ವಿವರಿಸಿದ ಅವರು, ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಸಳ್ವಾಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ದೇಶದ ಭವಿಷ್ಯದ ಹಿತದೃಷ್ಟಿಯಿಂದ ಯುವಜನರು ಆರೋಗ್ಯವಂತ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಬೇಕು ಎಂದು ಕರೆ ನೀಡಿದರು. ಜನಸೇವಾ ಟ್ರಸ್ಟ್ ಇದರ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಅಮಲು ಮುಕ್ತ ಭಾರತಕ್ಕಾಗಿ ಯುವಜನರು ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು ಎಂದರು. ಟೀಮ್ ಅಭಿಮತ ಸಹ ಸಂಚಾಲಕ ಮತ್ತು ರಾಷ್ಟ್ರೀಯ ವೇಟ್ ಲಿಫ್ಟರ್ ಶರತ್ ಕುಮಾರ್ ಶೆಟ್ಟಿ ವಡ್ಡರ್ಸೆ ಪ್ರತಿಜ್ಞೆ ಬೋಧಿಸಿದರು. 

ಜನಸೇವಾ ಟ್ರಸ್ಟ್ ಕೋರ್ ಕಮಿಟಿ ಮುಖ್ಯಸ್ಥ ಉದಯ ಶೆಟ್ಟಿ ಪಡುಕರೆ, ಐಕ್ಯೂಎಸಿ ಸಂಚಾಲಕಿ ವಿದ್ಯಾ ಪಿ., ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಡಾ.ಹೇಮಾ ಎಸ್. ಕೊಡದ್, ಆಂಟಿ ಡ್ರಗ್ ಸೆಲ್ ಸಂಚಾಲಕ ಪಾಪಣ್ಣ ಎನ್.ಎ., ಸಮಾಜಕಾರ್ಯ ವೇದಿಕೆ ಸಂಚಾಲಕ ಸತೀಶ್ ಕುಮಾರ್ ಬಿ.ಡಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಸಿ.ಕೆ., ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕಾವ್ಯಾ ಮತ್ತು ತಂಡ ಪ್ರಾರ್ಥಿಸಿದರು. ಪ್ರಥಮ ಎಂ.ಎಸ್. ಡಬ್ಲ್ಯೂ ವಿದ್ಯಾರ್ಥಿಗಳಾದ ವಿಘ್ನೇಶ್ ಸ್ವಾಗತಿಸಿ, ಪ್ರಕಾಶ್ ವಂದಿಸಿದರು. ಪ್ರತಿಮಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮಹಿಮಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!