ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂ. ಆಮಿಷ ನಿಜ- ಡಿಕೆಶಿ
ಬೆಂಗಳೂರು: ಐವತ್ತು ಜನ ಕಾಂಗ್ರೆಸ್ ಎಂಎಲ್ಎ ಗಳಿಗೆ ಬಿಜೆಪಿಯವರು 50 ಕೋಟಿ ಆಮಿಷ ಒಡ್ಡಿರುವುದು ನಿಜ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷದ ಐವತ್ತು ಶಾಸಕರಿಗೆ ತಲಾ 50 ಕೋಟಿಯಂತೆ ಬಿಜೆಪಿಯವರು ಆಮಿಷ ಒಡ್ದುತ್ತಿದ್ದಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದರು. ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಈ ವಿಚಾರವನ್ನು ಕೆಲವರು ಬಂದು ಮುಖ್ಯಮಂತ್ರಿಯ ಬಳಿ ತಿಳಿಸಿದ್ದಾರೆ. ಈ ಸಂಗತಿಯನ್ನು ಮುಖ್ಯಮಂತ್ರಿಗಳು ಮಾಧ್ಯಮದ ಮುಂದೆ ಹೇಳಿದ್ದಾರೆ. ಮಿಕ್ಕ ವಿಚಾರಗಳನ್ನು ಅನಂತರ ನಿಮಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ದೇಶದ ನಿರ್ಮಾಣಕ್ಕಾಗಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹಾಕಿರುವ ಭದ್ರ ಬುನಾದಿಗೆ ಬೆಂಗಳೂರು ಸಾಕ್ಷಿ ಎಂದು ತಿಳಿಸಿದರು. ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಗುರುವಾರ ನಡೆದ ಜವಾಹರ್ ಲಾಲ್ ನೆಹರೂ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, ನೆಹರೂ ಅವರ ಕೊಡುಗೆ ಹಾಗೂ ಮಕ್ಕಳ ಏಳಿಗೆಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ಸ್ಮರಿಸಿದರು. ನೆಹರೂ ಅವರು ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದಿಮೆಗಳು ಹೆಚ್ಎಎಲ್, ಐಟಿಐ, ಬಿಇಎಂಎಲ್, ಬಿಇಎಲ್, ಇಸ್ರೋ ಸೇರಿದಂತೆ ಅನೇಕ ಉದ್ದಿಮೆಗಳು ಆರಂಭಿಸಿದರು. ಇಲ್ಲಿರುವ ಮಾನವ ಸಂಪನ್ಮೂಲ, ಗುಣಮಟ್ಟದ ಶಿಕ್ಷಣದ ಮೇಲೆ ವಿಶೇಷ ಆದ್ಯತೆ ನೀಡಿದರು. ಅವರು ಹಾಕಿಕೊಟ್ಟ ಅಡಿಪಾಯದಲ್ಲಿ ನಾವು ಇಂದು ಈ ದೇಶ ಕಟ್ಟುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ ಸಿಗಬೇಕು, ಮಕ್ಕಳು ಶಾಲೆಯಿಂದ ವಿಮುಖರಾಗಬಾರದು ಎಂದು ಎಸ್ ಎಂ ಕೃಷ್ಣ ಅವರ ಅವಧಿಯಲ್ಲಿ ಬಿಸಿಯೂಟ ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ ನೀಡಿ ಪೌಷ್ಠಿಕತೆ ಹೆಚ್ಚಿಸಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಅಂಗನವಾಡಿ ಕಾರ್ಯಕ್ರಮ ಮಾಡಲಾಯಿತು. ಹೀಗೆ ಕಾಂಗ್ರೆಸ್ ಸರ್ಕಾರ ಸದಾ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.