ರವಿ ಪೂಜಾರಿಯ ಸಹಚರ, ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ ಬಂಧನ
ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಆಪ್ತ ಸಹಚರ, ಕಾಂಗ್ರೆಸ್ ಮುಖಂಡ ಪಡುಬಿದ್ರೆ ಗುಲಾಂ ಮೊಹಮ್ಮದ್ ಎಂಬಾತನನ್ನು ಕೇಂದ್ರ ಅಪರಾಧ ದಳದ ಪೊಲೀಸರು ಮಂಗಳೂರಿನಿಂದ ಬಂಧಿಸಿದ್ದಾರೆ.
ಪೊಲೀಸರ ವಶದಲ್ಲಿರುವ ಪೂಜಾರಿ ವಿಚಾರಣೆ ಮುಂದುವರಿದಿದ್ದು, ಆತ ನೀಡಿದ ಮಾಹಿತಿ ಆಧರಿಸಿ ಗುಲಾಂನನ್ನು ಬಂಧಿಸಲಾಗಿದೆ.
ಸುಲಿಗೆ ಸೇರಿದಂತೆ ಪೂಜಾರಿ ನಡೆಸುತ್ತಿದ್ದ ಅಪರಾಧ ಚಟುವಟಿಕೆಗೆ ಗುಲಾಂ ಸಹಾಯ ಮಾಡುತ್ತಿದ್ದ. ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುಲಾಂನ ವಿಚಾರಣೆಯಿಂದ ಪೂಜಾರಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದೂ ಸಿಸಿಬಿ ಪೊಲೀಸರು ತಿಳಿಸಿದರು.
ರವಿ ಪೂಜಾರಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಈತನ ವಿರುದ್ಧ ಬೆಂಗಳೂರಿನಲ್ಲಿ 46 ಎಫ್ ಐ ಆರ್ ದಾಖಲಾಗಿದೆ, ಇದರಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ಹಫ್ತಾ ವಸೂಲಿ, ಬೆದರಿಕೆ ಯಂತಹ 20 ಪ್ರಕರಣಗಳಾದರೆ, ಇನ್ನುಳಿದ 26 ಕೇಸ್‌ಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿದ್ದವು.
ಪಾತಕಿ ಪೂಜಾರಿ ವಿರುದ್ಧ ಮುಂಬೈನಲ್ಲಿ 120ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮುಂಬೈ ಪೊಲೀಸರು ಈತನಿಗಾಗಿ ಕಾಯುತ್ತಿದ್ದಾರೆ. ರವಿ ಪೂಜಾರಿ ವಿರುದ್ಧ ದೇಶದ ವಿವಿಧೆಡೆ ಹತ್ತಾರು ವರ್ಷಗಳ ಹಿಂದೆ ದಾಖಲೆ ನಾಮಾವಶೇಷವಾಗಿದ್ದ ಹಲವು ಪ್ರಕರಣಗಳಿಗೆ ಇದೀಗ ಮರುಜೀವ ಬಂದಿದೆ.
ರವಿ ಪೂಜಾರಿ ಆಫ್ರಿಕಾದ ಸೆನಗಲ್‌ನಲ್ಲಿ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಮಾಡಿರುವ ವಿಚಾರವನ್ನು ಈಗಾಗಲೇ ಪತ್ತೆಹಚ್ಚುವ ಇಡಿ ಅಧಿಕಾರಿಗಳ ತಂಡ, ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದೆ.