ಎಫ್‌ಐಆರ್ ಮೇಲಿನ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಎದುರಿಸಿ: ಸವಾಲು ಹಾಕಿದ ರಘುಪತಿ ಭಟ್
ಉಡುಪಿ, ನ.13: ಮಹಾಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಸಾಲ ಪತ್ರದಲ್ಲಿರುವುದು ನಮ್ಮ ಸಹಿ ಎಲ್ಲ ಎಂಬುದಾಗಿ ಸಂತ್ರಸ್ತರು ದಾಖಲಿಸಿರುವ ಎಫ್‌ಐಆರ್ ಗೆ ಮಹಾ ಲಕ್ಷ್ಮೀ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಯಶ್‌ಪಾಲ್ ಸುವರ್ಣ ಹೈಕೋರ್ಟ್ ನಲ್ಲಿ ವಿಧಿಸಿರುವ ತಡೆಯಾಜ್ಞೆಯನ್ನು ಸ್ವಯಂ ಹಿಂಪಡೆದು ತನಿಖೆಯನ್ನು ಎದುರಿಸಲಿ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಸವಾಲು ಹಾಕಿದ್ದಾರೆ.
ಈ ಕುರಿತು ರಘುಪತಿ ಭಟ್, ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರಿಗೆ ಪತ್ರ ಬರೆದಿದ್ದು, ಯಶ್‌ಪಾಲ್ ಸುವರ್ಣ ಸಿ.ಬಿ.ಐ., ಇ.ಡಿ. ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿರುವುದು ಪ್ರಶಂಸಾರ್ಹವಾಗಿದೆ. ಆದರೆ ಈ ತನಿಖೆಗಳನ್ನು ನಡೆಸುವ ಮುಂಚಿತವಾಗಿ ತಮ್ಮದೇ ವ್ಯಾಪ್ತಿಯಲ್ಲಿ ಉಡುಪಿ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರು ಈಗಾಗಲೇ ನೀಡಿರುವ ದೂರಿಗೆ ಆಗಿರುವ ಎಫ್‌ಐಆರ್ ಮೇಲೆ ತಾವು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಈ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂತ್ರಸ್ತರ ಸಾಲದ ಅರ್ಜಿಗಳಲ್ಲಿ ಹಾಗೂ ಸಾಲದ ದಾಖಲಾತಿಗಳಲ್ಲಿ ಸಂತ್ರಸ್ತರು ತಮ್ಮ ಸಹಿ ಅಲ್ಲ ಎಂದು ಹೇಳುತ್ತಿರುವ ಕಾರಣ ಈ ಸಹಿಗಳ ಸತ್ಯಸತ್ಯಾತೆಯನ್ನು ತಿಳಿಯಲು ಪೊಲೀಸ್ ಇಲಾಖೆಯ ಮೂಲಕ ಎಫ್‌ಎಸ್‌ಎಲ್(ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗೆ ಕಳುಹಿಸಲು ಅನುವು ಮಾಡಿಕೊಡಬೇಕು. ಆದುದರಿಂದ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ಹಿಂಪಡೆದು ನ್ಯಾಯಯುತವಾದ ತನಿಖೆ ನಡೆದು ಸತ್ಯಸತ್ಯಾತೆಯು ಹೊರಬರಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನನ್ನ ಈ ಹೋರಾಟ, ಅನ್ಯಾಯವಾಗಿದೆಯೆಂದು ತಮ್ಮ ಅಳಲು ತೋಡಿಕೊಂಡು ಸಹಾಯ ನಿರೀಕ್ಷಿಸಿದ ಸಂತ್ರಸ್ತರ ಹಿತ ಕಾಪಾಡುವುದೇ ಹೊರತು, ತಮ್ಮ ಅಥವಾ ಬ್ಯಾಂಕಿನ ವಿರುದ್ಧ ಆಗಿರುವುದಿಲ್ಲ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿಯಿರುವುದಿಲ್ಲ. ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿರುವ ಸಾಲಗಾರ ಸಂತ್ರಸ್ತರ ಪರ ಕಾನೂನು ಹೋರಾಟ ಮಾಡಲು ನಾನು ಇನ್ನು ಮುಂದೆಯೂ ಬದ್ಧನಾಗಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.