ಉಡುಪಿ ಜಿಲ್ಲಾ ಕಸಾಪದಲ್ಲಿ ಅಂತ:ಕಲಹ: ಕಸಾಪ ತಾಲೂಕು ಅಧ್ಯಕ್ಷರ ಪದಚ್ಯುತಿಗೆ ಹೈಕೋರ್ಟ್ ತಡೆಯಾಜ್ಞೆ

ಉಡುಪಿ, ನ.12: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಏಕಾಏಕಿ ಪದಚ್ಯುತಗೊಳಿಸಿದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೇವಲ 20 ದಿನಗಳ ಅಂತರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ಹಾಗೂ ವಿದ್ಯಾಮಾನಗಳಲ್ಲಿರುವ ಕಾನೂನಾತ್ಮಕ ಲೋಪದೋಷಗಳನ್ನು, ಜಿಲ್ಲಾ ಕಸಾಪ ಅಧ್ಯಕ್ಷರ ಅಧಿಕಾರದ ವ್ಯಾಪ್ತಿ ಮೀರಿದ ನಡವಳಿಕೆ ಆದೇಶವನ್ನು ಪರಿಶೀಲಿಸಿದ ಕರ್ನಾಟಕ ಉಚ್ಛನ್ಯಾಯಾಲಯ ಜಿಲ್ಲಾಧ್ಯಕ್ಷರ ಆದೇಶಕ್ಕೆ ತಡೆಯಾಜ್ಞೆ ನೀಡಿದೆಂದು ರವಿರಾಜ್ ಎಚ್.ಪಿ. ತಿಳಿಸಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸುಮಾರು 15ರಿಂದ 20 ದಿನಗಳೊಳಗೆ ನನಗೆ ನಿರಂತರ ಐದು ನೋಟೀಸುಗಳನ್ನು ನೀಡಿದ್ದು, ಇದು ತಮ್ಮನ್ನು ಹುದ್ದೆಯಿಂದ ತೆಗೆಯಲೇಬೇಕೆಂಬ ಹಠದ ನಿರ್ಧಾರ ಮಾಡಿರುವುದಕ್ಕೆ ದ್ಯೋತಕ ಎಂದವರು ಹೇಳಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾಗಿ ತಾವು ಕಸಾಪದ ಮೂಲಕ 300ಕ್ಕೂ ಅಧಿಕ ಕಾರ್ಯ ಕ್ರಮಗಳನ್ನು ಮಾಡಿದ್ದೇವೆ. ಎರಡು ತಾಲೂಕು ಸಮ್ಮೇಳನಗಳನ್ನು ನಡೆಸಿದ್ದೇವೆ. ಇದು ರಾಜ್ಯ ಕಸಾಪದ ಯಾವುದೇ ಘಟಕ ಮಾಡದಷ್ಟು ಕನ್ನಡಪರ ಕೆಲಸವನ್ನು ನಾವು ಮಾಡಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ನಾವು ಸಕ್ರೀಯರಾಗಿದ್ದೆವು ಎಂದವರು ತಿಳಿಸಿದರು.

‘ಕನ್ನಡ ಮಾತಾಡು’, ‘ಕಥೆ ಕೇಳೋಣ’, ‘ಮನೆಯೇ ಗ್ರಂಥಾಲಯ’, ‘ಕನ್ನಡ ಶಾಲೆ ಉಳಿಸಿ-ಬೆಳೆಸಿ’ ಅಭಿಯಾನ ಮುಂತಾದ ವಿಶಿಷ್ಟ ಅಭಿಯಾನಗಳ ಮೂಲಕ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದೇವೆ. ಅದರಲ್ಲೂ ಮನೆಯೇ ಗ್ರಂಥಾ ಲಯದ 100ಕ್ಕೂ ಅಧಿಕ ಕಾರ್ಯಕ್ರಮ ನಡೆಸಿದ್ದೇವೆ. ಇದರೊಂದಿಗೆ ಎರಡು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗಳನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೇ, ಗಣಕ ಲಿಪಿ ಪಿತಾಮಹ ನಾಡೋಜ ಕೆ.ಪಿ.ರಾವ್ ಅಭಿನಂದನಾ ಸಮಾರಂಭ, ಕು.ಗೋ. ಅಭಿನಂದನಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿದ್ದೇವೆ ಎಂದರು.

ಅಲ್ಲದೇ ಈಗಾಗಲೇ 130 ಸರಣಿ ಮುಗಿಸಿ ಮುಂದುವರಿದಿರುವ ಕಥೆ ಕೇಳೋಣ ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯ ಕಸಾಪ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರಾಡಿಗರೇ ಶಾಲು ಹೊದೆಸಿ ಗೌರವಿಸಿದ್ದರು ಎಂದರು.

ಆದರೆ 20 ದಿನಗಳ ಹಿಂದೆ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗರು ಏಕಾಏಕಿ ಅನಿರೀಕ್ಷಿತ ಆರೋಪದ ಪತ್ರಗಳನ್ನು ತಾಲೂಕು ಕಸಾಪ ಅಧ್ಯಕ್ಷರಿಗೆ ಕಳುಹಿಸಿದ್ದು, ಪ್ರತಿ ಪತ್ರದಲ್ಲೂ ಮೂರು ದಿನಗಳೊಳಗೆ ಉತ್ತರ ನೀಡುವಂತೆ ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಕನ್ನಡ ಮೇಲಿನ ಅಭಿಮಾನದಿಂದ ಜಿಲ್ಲಾಧ್ಯಕ್ಷರ ಅನುಮತಿ ಪಡೆದೇ ತಾಲೂಕು ಘಟಕ ಕನ್ನಡಪರ ಕಾರ್ಯಕ್ರಮ ಗಳನ್ನು ಮಾಡುತಿದ್ದರೂ ಅವರು ಮಾಡುತಿದ್ದ ಯಾವುದೇ ಆರೋಪದಲ್ಲೂ ಸತ್ಯವಿದ್ದಿ ರಲಿಲ್ಲ ಎಂದರು. ಪ್ರತಿ ಪತ್ರಕ್ಕೂ ಸಾಕ್ಷಿ, ಆಧಾರ, ದಾಖಲೆಗಳೊಂದಿಗೆ ಉತ್ತರ ಬರೆದರೂ ಅವರನ್ನು ತಿರಸ್ಕರಿಸಿದ್ದರು ಎಂದು ರವಿರಾಜ್ ನುಡಿದರು.

ಕೊನೆಗೆ ನೀವು ಅಸಲಿ ಆಧಾರಗಳನ್ನು ಇಟ್ಟಿಲ್ಲ, ಪ್ರತಿ ಇಟ್ಟಿದ್ದೀರಿ, ಅದು ಸರಿಯಾಗಿಲ್ಲ ಎಂದು ಸುಳ್ಳು ಆರೋಪ ಮಾಡಿ, ಕಸಾಪದ ಆಯವುದೇ ಅಧಿಕೃತ ಸಭೆ ಕರೆಯದೇ, ತಮ್ಮಿಂದ ಮುಖ:ತ ವಿವರಣೆ ಪಡೆಯದೇ ಏಕಾಏಕಿ ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿರುವಾಗಿ ನ.5ರಂದು ನೋಟೀಸು ನೀಡಿದರು ಎಂದರು.

ಕಸಾಪ ಜಿಲ್ಲಾಧ್ಯಕ್ಷರ ಕ್ರಮವನ್ನು ಖಂಡಿಸಿ, ಜಿಲ್ಲೆಯ ಸಾಹಿತಿಗಳು ಸೇರಿದಂತೆ ಉಡುಪಿಯ ಗಣ್ಯರು, ಕನ್ನಡಪರ ಹೋರಾಟಗಾರರು ತಾಲೂಕು ಘಟಕಕ್ಕೆ ಬೆಂಬಲ ನೀಡುತಿದ್ದಾರೆ ಎಂದ ಅವರು ಮುಂದೆಯೂ ಕನ್ನಡ ಮನಸ್ಸುಗಳು ಒಂದಾಗಿ ಕನ್ನಡಪರ ಕೆಲಸಗಳ ನ್ನು ಮಾಡಬೇಕೆಂಬುದು ತಮ್ಮ ಗುರಿಯಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!