ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ- ಎಸ್ಐ, ಹೆಡ್‌ಕಾನ್ಸ್ಟೇಬಲ್ ಅಮಾನತು
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಠಾಣೆ ಪೊಲೀಸ್ ಉಪನಿರೀಕ್ಷಕ ಮತ್ತು ಹೆಡ್‌ಕಾನ್ಸ್ಟೇಬಲ್ ಅಮಾನತು ಮಾಡಿ ಆದೇಶಿಸಲಾಗಿದೆ.
ರವಿವಾರ ಬ್ರಹ್ಮಾವರ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಠಾಣಾಧಿಕಾರಿ ಮಧು ಬಿ.ಇ ಮತ್ತು ಪ್ರಭಾರ ಠಾಣಾಧಿಕಾರಿ ಹೆಡ್‌ಕಾನ್ಸ್ಟೇಬಲ್ ಸುಜಾತ ಇವರನ್ನು ಉಡುಪಿ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿರುತ್ತಾರೆ.
ಆರೋಪಿಗಳನ್ನು ಬಂಧಿಸುವಾಗ ತೆಗೆದುಕೊಳ್ಳ ಬೇಕಾಗುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದೆ ಇರುವ ಕುರಿತು ಈ ಕ್ರಮಕೈಗೊಳ್ಳಲಾಗಿದೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ತನಿಖೆಗೆ ಸಿಐಡಿ ಪೊಲೀಸರ ತಂಡ ಬ್ರಹ್ಮಾವರಕ್ಕೆ
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರು ಘಟನಾ ಸ್ಥಳಕ್ಕೆ ಮತ್ತು ಠಾಣೆಗೆ ಕೊಟ್ಟಿದ್ದಾರೆ.
ಬೆಂಗಳೂರಿನಿಂದ ಉಡುಪಿಗೆ ತಲುಪಿರುವ ಸಿಐಡಿ ಪೊಲೀಸರ ತಂಡವು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಂಡಿದೆ.
ಬಳಿಕ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತದೇಹ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು. ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಪ್ರಕರಣಕ್ಕೆ ಸಂಬಂಧಿಸಿ ಕೇರಳದಿಂದ ಮೃತರ ಮನೆಯವರು ಈಗಾಗಲೇ ಬ್ರಹ್ಮಾವರ ತಲುಪಿದ್ದು, ಅಧಿಕೃತ ದೂರು ನೀಡಿದ್ದಾರೆ.
ಮಹಿಳೆ ಹಾಗೂ ಮಕ್ಕಳಿಗೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಕೇರಳದ ಕೊಲ್ಲಂ ಮೂಲದ ಬಿಜು ಮೋಹನ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆ ತಂದು ಲಾಕಪ್ ನಲ್ಲಿ ಇರಿಸಲಾಗಿತ್ತು. ಭಾನುವಾರ ನಸುಕಿನ ವೇಳೆ ಲಾಕಪ್ ನಲ್ಲೇ ಆತ ಮೃತಪಟ್ಟಿದ್ದ.