ಚುನಾವಣೆಗೆ, ಸರ್ಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ: ಗೋವಿಂದ ರಾಜ್ ಹೆಗ್ಡೆ
ಉಡುಪಿ: ಮಹಾರಾಷ್ಟ್ರ ಚುನಾವಣೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮದ್ಯ ಮಾರಾಟಗಾರ ರಿಂದ ರೂ. 700 ಕೋಟಿ ಲೂಟಿ ಹೊಡೆದಿದೆ ಎಂಬ ಆರೋಪದ ಕುರಿತು ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದ ಅಬಕಾರಿ ಹಣ ಆರೋಪದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 500, 700, 900 ಕೋಟಿ ಹಣ ನೀಡಿದ್ದೇವೆ ಎನ್ನುತ್ತಿದ್ದಾರೆ. ಚುನಾವಣೆಗೆ, ಸರ್ಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ. ದಯವಿಟ್ಟು ಈ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದರು.
ಬೆಂಗಳೂರಿನಲ್ಲಿ 25ನೇ ತಾರೀಕು ಪ್ರತಿಭಟನಾ ಸಭೆ ಮಾಡಿದ್ದೆವು. 3000ಕ್ಕೂ ಹೆಚ್ಚು ಜನ ಸೇರಿದ್ದೆವು. ಅಬಕಾರಿ ಅಧಿಕಾರಿಗಳು ಪ್ರಮೋಷನ್ ಗೆ ನಾವು ಹಣ ಕೊಡಬೇಕು ಎಂದು ಹೇಳಿದ್ದರು. ಹಣಕೊಟ್ಟು ಟ್ರಾನ್ಸ್ಫರ್ ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮಗೆ ಜಾಸ್ತಿ ಲಂಚ ಕೊಡಿ ಎಂದು ಕೇಳುತ್ತಿದ್ದಾರೆ ಎಂದು 3000ಕ್ಕೂ ಅಧಿಕ ಸನ್ನದುದಾರರು ಈ ವಿಚಾರವನ್ನು ಪ್ರತಿಭಟನೆಯಲ್ಲಿ ಹೇಳಿದ್ದೆವು. ಅದನ್ನು ಹೊರತು ಪಡಿಸಿದರೆ ನಾವು ಯಾವುದೇ ಆರೋಪ ಮಾಡಿಲ್ಲ. ನಾವು ಯಾರಿಗೂ ಚುನಾವಣೆ ರಾಜಕೀಯಕ್ಕೆ ಹಣ ಕೊಟ್ಟಿಲ್ಲ. ದಯವಿಟ್ಟು ನಮ್ಮ ಹೇಳಿಕೆಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದರು.
ಕರ್ನಾಟಕದ ಉಪಚುನಾವಣೆಗೂ ಅಬಕಾರಿ ಹಣ ವಿನಿಯೋಗ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾವು ವ್ಯವಹಾರಸ್ಥರು ಸ್ವಾಮಿ. ನಾವ್ಯಾಕೆ ಚುನಾವಣೆಗೆ ಹಣಕೊಡಬೇಕು. ಹಿಂದಿನ ಸರಕಾರಗ ಳು ಇದ್ದಾಗಲೂ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೆವು .ಆ ಸರ್ಕಾರ ಇದ್ದಾಗಲೂ ಪ್ರಮೋಷನ್‌ಗೆ ಟ್ರಾನ್ಸ್ಫರ್‌ಗೆ ಮಂತ್ರಿಗಳು ಹಣ ತೆಗೆದುಕೊಳ್ಳುತ್ತಿದ್ದರು. 15 ವರ್ಷಗ ಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಈಗ ಸಮಸ್ಯೆ ಮತ್ತಷ್ಟು ಉಲ್ಬಣ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
ಕಟ್ಟಾಸುಬ್ರಹ್ಮಣ್ಯ ನಾಯ್ಡು ಅಬಕಾರಿ ಸಚಿವ ಆಗಿದ್ದಾಗ ಏನಾಗಿದೆ ಗೊತ್ತಿಲ್ವಾ? ಸನ್ನದುದಾರರಿಗೆ ಸಿಗುವ ಮಾರ್ಜಿನ್ ಶೇ.20 ರಿಂದ ಶೇ.10ಕ್ಕೆ ಇಳಿಸಿದ್ದು ಯಾರು? ಇದನ್ನು ಯಾಕೆ ಇಳಿಸಿದರು ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಉದ್ಯಮದಲ್ಲಿ ಬೆಂಕಿ ಬಿದ್ದಿದೆ. ನಮ್ಮ ಸಮಸ್ಯೆ ಬಗೆಹರಿಸಿ ಬೆಂಕಿ ನಂದಿಸುವಂತೆ ಸರ್ಕಾರದ ಮುಂದೆ ಹೋಗಿದ್ದೇವೆ. ಆದರೆ ಬೆಂಕಿ ನಂದಿಸಬೇಡಿ, ನಾನು ಬಿಡಿ ಹಚ್ಚಿಕೊಳ್ಳುತ್ತೇನೆ ಎಂಬಂತೆ ಕೆಲ ಪಕ್ಷಗಳು ವರ್ತಿಸುತ್ತಿವೆ. ನಾವು ತುಂಬಾ ನೊಂದಿದ್ದೇವೆ. 15 ವರ್ಷಗಳಿಂದ ಬಂದ ಎಲ್ಲಾ ಸರಕಾರಗಳಿಂದ ಸಮಸ್ಯೆಯಾಗಿದೆ.ಎಲ್ಲಾ ಸಚಿವರು ಕೂಡ ಟ್ರಾನ್ಸ್ಫರ್‌ಗೆ ಪ್ರಮೋಷನ್ ಗೆ ಲಂಚ ತೆಗೆದುಕೊಳ್ಳುವ ಪದ್ಧತಿ ಚಾಲ್ತಿಯಲ್ಲಿದೆ. ನಮ್ಮನ್ನು ನಮ್ಮಷ್ಟಕ್ಕೇ ಉದ್ಯಮ ಮಾಡಲು ಬಿಡಿ. ಚುನಾವಣಾ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ. ಪ್ರಧಾನಮಂತ್ರಿಯವರಿಗೆ ಯಾವ ಆಧಾರದಲ್ಲಿ ಯಾರು ಈ ಮಾಹಿತಿ ನೀಡಿದರು ಅಂತ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯಪಾಲರಿಗೆ ದೂರು ಕೊಟ್ಟದ್ದು ನಾವಲ್ಲ. ಆರ್ಟಿಐ ಕಾರ್ಯಕರ್ತ ರಾಜ್ಯಪಾಲರಿಗೆ ದೂರು ನೀಡಿದ್ದಾನೆ. ಚುನಾವಣಾ ರಾಜಕೀಯ ಮಾಡಬೇಡಿ ಅಂತ ಕೈಮುಗಿದು ಕೇಳಿಕೊಳ್ಳುತ್ತೇನೆ. ನವಂಬರ್ 20ರಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಬಂದ್ ನಡೆಸಲಿದ್ದೇವೆ ಎಂದು ತಿಳಿಸಿದರು.