ಸಂವಿಧಾನದ ಮೂಲಕವೇ ಈ ಭಯದ ರಾಜಕೀಯವನ್ನು ವಿರೋಧಿಸಬೇಕು- ಸಂಸದ ಸಸಿಕಾಂತ್ ಸೆಂಥಿಲ್
ಉಡುಪಿ, ನ.11: ಈ ದೇಶದಲ್ಲಿ ನಡೆಯುತ್ತಿರುವ ಬಲಪಂಥೀಯ ರಾಜಕೀಯದಿಂದ ಕಳೆದ 50 ವರ್ಷಗಳಿಂದ ಗೌರವ, ಹಕ್ಕುಗಳನ್ನು ಪಡೆದುಕೊಂಡ ಶೇ.80ರಷ್ಟಿರುವ ಹಿಂದುಗಳು ಹಾಗೂ ಶೇ .50 ಇರುವ ಮಹಿಳೆಯರೇ ನಿಜವಾದ ಬಲಿಪಶುಗಳು. ಅದಕ್ಕಾಗಿ ಅವರು ಸಂವಿಧಾನವನ್ನು ನಾಶ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಬಲಪಂಥೀಯ ರಾಜಕೀಯದಿಂದ ಕೇವಲ ಮುಸ್ಲಿಮರಿಗೆ ಮಾತ್ರ ಅಪಾಯ ಅಲ್ಲ. ಹಿಂದುಗಳಿಗೂ, ಮಹಿಳೆಯರಿಗೂ ಅಪಾಯ ಇದೆ ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ರವಿವಾರ ಆಯೋಜಿಸಲಾದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನವ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಮಾನತೆ ಒಪ್ಪದ ಶೇ.20ರಷ್ಟು ಜನರ ಗುಂಪು ನಮ್ಮ ದೇಶದಲ್ಲಿದೆ. ಅದೇ ರೀತಿ ಈ ದೇಶದಲ್ಲಿ ಸಂವಿಧಾನ ಬಂದ ನಂತರ ಶೇ.80 ಹಿಂದುಗಳಿಗೆ ಗೌರವಯುತ ಜೀವನ ಹಾಗೂ ಶಿಕ್ಷಣ ದೊರೆತಿದೆ. ಹೀಗಾಗಿ ಇದೀಗ ನಮ್ಮ 80-20 ರಾಜಕೀಯ ನಡೆಯುತ್ತಿದೆ. ಈ ರಾಜಕೀಯದಿಂದ ಅಧಿಕಾರಕ್ಕೆ ಬರುವುದು ಮತ್ತು ಅಧಿಕಾರಕ್ಕೆ ಬಂದ ನಂತರ ಶೇ.80ರಷ್ಟಿರುವ ಹಿಂದುಗಳಿಗೆ ತುಳಿಯುವುದಾಗಿದೆ ಎಂದರು.
80-20 ಬಲಪಂಥೀಯ ರಾಜಕೀಯವು ದ್ವೇಷದ ರಾಜಕೀಯ ಅಲ್ಲ, ಬದಲು ಭಯದ ರಾಜಕೀಯ ನಡೆಸುತ್ತಿದೆ. ಜನರನ್ನು ಭಯಪಡಿಸಿ ಮತ ಪಡೆದು ಅಧಿಕಾರಕ್ಕೇರುವುದೇ ಅದರ ಉದ್ದೇಶವಾಗಿದೆ. ಇದೇ ಭಯದಿಂದ ಅಭದ್ರತೆ ಮೂಡಿ ಸಮಾಜದಲ್ಲಿ ಸಂಘರ್ಷ ಉಂಟಾಗುತ್ತದೆ. ಈ ಸಂಘರ್ಷ ಇಡೀ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಆದುದರಿಂದ ಇದನ್ನು ತಪ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ಬಹುಸಂಖ್ಯಾತರಿಗೆ ಇದೆ. ಸಂವಿಧಾನದ ಮೂಲಕ ಈ ಭಯದ ರಾಜಕೀಯವನ್ನು ವಿರೋಧಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನೀವೇ ಬೆಂಕಿ ಇಟ್ಟ ಹಾಗೆ ಆಗುತ್ತದೆ. ಬಲಪಂಥೀಯ ರಾಜಕೀಯ ಬೆಳೆಯುಲು ಬಹುಸಂಖ್ಯಾತ ಸಮುದಾಯದ ಮೌನವೇ ಮುಖ್ಯ ಕಾರಣ ಎಂದು ಅವರು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಮುಸ್ಲಿಮರು ಈ ದೇಶಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಆ ಮೂಲಕ ಸಮುದಾಯ, ದೇಶವನ್ನು ಜೋಡಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಆದರೆ ನಮ್ಮ ಸೌಹಾರ್ದ ಸಂಸ್ಕೃತಿಯ ಅರಿವು ಹಾಗೂ ಇತಿಹಾಸ ಗೊತ್ತಿಲ್ಲ ಕೆಲವರು ಅದನ್ನು ತಿರುಚುತ್ತಿದ್ದಾರೆ. ಆದರೆ ನಮ್ಮ ಚರಿತ್ರೆ ಅತ್ಯಂತ ಬಲಿಷ್ಟವಾಗಿದೆ. ಅದನ್ನು ಇಟ್ಟುಕೊಂಡು ನಾವು ನಾಡನ್ನು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾವೇಶವನ್ನು ಉದ್ಘಾಟಿಸಿದ ಯೆನೆಪೋಯ ವಿವಿ ಕುಲಪತಿ ಅಬ್ದುಲ್ಲಾ ಕುಂಞಿ ಮಾತನಾಡಿ, ಇಂತಹ ಸೌಹಾರ್ದ ಕಾರ್ಯಕ್ರಮಗಳು ಇಂದಿನ ಕಾಲದ ಪ್ರಸ್ತುತ ಹಾಗೂ ಬಹಳ ಅಗತ್ಯವಾಗಿದೆ. ಸಮುದಾಯ ಗಳ ಮಧ್ಯೆ ಮಧುರ ಸಂಬಂಧ ಬೆಸೆಯುವ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರೀತಿ ವಿಶ್ವಾಸದಿಂದ ಕೂಡಿ ಬದುಕಿದಾಗ ಸಾಮರಸ್ಯದ ಸಮಾಜ ಹಾಗೂ ಸದೃಢ ದೇಶ ನಿರ್ಮಾಣ ಸಾಧ್ಯ. ಎಂದಿಗೂ ಧರ್ಮ ಜಾತಿ ಭಾಷೆಯು ನಮ್ಮ ಸೌಹಾರ್ದತೆ ಅಡ್ಡಿಯಾಗಬಾರದು ಎಂದರು.
ಆಶಯ ಭಾಷಣ ಮಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ, ಇಂದು ಸಮಾಜದಲ್ಲಿ ಬಹಳ ವ್ಯವಸ್ಥಿತವಾಗಿ ದ್ವೇಷ ಹರಡುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗು ತ್ತಿದೆ. ಮಕ್ಕಳಲ್ಲಿ, ಶಾಲಾ ವಿದ್ಯಾರ್ಥಿಗಳಲ್ಲಿಯೂ ಧರ್ಮದ ದ್ವೇಷವನ್ನು ಬಿತ್ತಲಾಗುತ್ತಿದೆ. ಈ ಎಲ್ಲದರ ಬಲಿಪಶು ಹೆಚ್ಚಾಗಿ ಮುಸ್ಲಿಮರಾದರು ಎಂದು ತಿಳಿಸಿದರು.
ಸಮಾಜದಲ್ಲಿ ಸುಳ್ಳುಗಳನ್ನು ಬಿತ್ತು ಮೂಲಕ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಬಿತ್ತು ಕಾರ್ಯ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಗುರಿಯನ್ನಾಗಿಸುವ ಕೆಲಸ ನಡೆಯುತ್ತಿದೆ. ಇದರ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ಇಂತಹ ಸೌಹಾರ್ದ ಸಮಾವೇಶಗಳು ಸಫಲ ಆಗಲು ಸಾಧ್ಯವಿಲ್ಲ. ಆದುದರಿಂದ ನಾವು ಜನರನ್ನು ಜೋಡಿಸುವ ದಾರಿಯನ್ನು ಕಂಡು ಕೊಳ್ಳಬೇಕಾಗಿದೆ. ಆಗ ಮಾತ್ರ ನಮ್ಮ ಮಧ್ಯೆ ಸ್ನೇಹ ಹಾಗೂ ಸಮುದಾಯ ಗಳ ಮಧ್ಯೆ ಮಿತ್ರತ್ವ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಮಾನವ ರತ್ನ ಪ್ರಶಸ್ತಿಯನ್ನು ಸಂಸದ ಸಸಿಕಾಂತ ಸೆಂಥಿಲ್, ಸೇವಾ ರತ್ನ ಪ್ರಶಸ್ತಿಯನ್ನು ಕಾರ್ಕಳದ ಉದ್ಯಮಿ ಕೆ. ಎಸ್.ನಿಸಾರ್ ಅಹ್ಮದ್ ಮತ್ತು ಚೊಚ್ಚಲ ಸೌಹಾರ್ದ ರತ್ನ ಪ್ರಶಸ್ತಿಯನ್ನು ಉಡುಪಿಯ ಧರ್ಮಗುರು ಫಾ. ವಿಲಿಯಮ್ ಮಾರ್ಟಿಸ್ ಅವರಿಗೆ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರಾದ ಸಾಹಿತಿ ಡಾ.ಗಣನಾಥ ಎಕ್ಕಾರ್,ಉಡುಪಿ ಜಿಪಂ ಮಾಜಿ ಅಧ್ಯಕ್ಷೆ ಸರಸು ಡಿ.ಬಂಗೇರ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪನಕ್ರೆ ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೋಡಿ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು.
ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಉದ್ಯಮಿ ಅಫ್ರೋಝ್ ಅಸ್ಸಾದಿ ದುಬೈ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಹ ಬಾಳ್ವೆಯ ಅಧ್ಯಕ್ಷ ಕೆ. ಫಣಿರಾಜ್, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್ ಉಪಸ್ಥಿತರಿದ್ದರು.
ಹಾಫಿಝ್ ಯೂನುಸ್ ಕುರ್‌ಆನ್ ಪಠಿಸಿದರು. ಶಂಕರ್ ದಾಸ್ ಮತ್ತು ಬಳಗದಿಂದ ಸೌಹಾರ್ದ ಗೀತೆ, ಹೂಡೆ ಸಾಲಿಹಾತ್ ಶಾಲಾ ಶಿಕ್ಷಕಿಯರಿಂದ ಪ್ರಾರ್ಥನಾ ಗೀತೆ ಹಾಡಿದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ವಂದಿಸಿದರು. ಡಾ.ಜಮಾಲುದ್ದೀನ್ ಹಿಂದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
‘ಸೌಹಾರ್ದತೆ ಛಿದ್ರಗೊಳಿಸುವವರು ದೇಶದ್ರೋಹಿಗಳು’
ಸೌಹಾರ್ದ ಎಂಬುದನ್ನು ನಾವು ಎಲ್ಲಿಂದಲೋ ಆಮದು ಮಾಡಿ ಕೊಂಡಿರುವುದಲ್ಲ. ಬದಲು ಇದು ಭಾರತ ದೇಶದ ನೆಲದ ಹುಟ್ಟು ಗುಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸೌಹಾರ್ದತೆ ಎಂಬುದು ನಮ್ಮ ಸಂಸ್ಕೃತಿಯೊಳಗೆ ಬೆಳೆದಿದೆ. ಅದನ್ನು ಛಿದ್ರ ಮಾಡುವ ಶಕ್ತಿಗಳೇ ನಿಜವಾದ ದೇಶದ್ರೋಹಿಗಳು. ಒಟ್ಟಾಗಿ ಸಹಹಾಳ್ವೆಯೊಂದಿಗೆ ಬದುಕಬೇಕು ಎಂಬುವರು ದೇಶಪ್ರೇಮಿಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ನಮ್ಮ ಸೌಹಾರ್ದ ಸಂಸ್ಕೃತಿಯ ಪರಂಪರೆಯನ್ನು ಇಂದು ಚೂರು ಚೂರು ಮಾಡುವಾಗ ಮೌನವಾಗಿ ಮಾತನಾಡದೇ ಇರುವುದು ಆತ್ಮಹತ್ಯೆಗೆ ಸಮಾನ ವಾದ ಪ್ರಕ್ರಿಯೆಯಾಗಿದೆ. ಈಗ ನಾವು ಮಾತನಾಡಲೇ ಬೇಕು ಮತ್ತು ಧ್ವನಿ ಎತ್ತಲೇ ಬೇಕು. ಈ ಮೂಲಕ ನಾವು ಹೊಸ ನಾಡನ್ನು ಕಟ್ಟಬೇಕಾಗಿದೆ. ಇದರಿಂದ ನಾಡಿನ ಹಾಗೂ ಮಕ್ಕಳ ಭವಿಷ್ಯ ಭದ್ರವಾ ಗಿರಲು ಸಾಧ್ಯ ಎಂದು ಅವರು ತಿಳಿಸಿದರು.
ಪ್ರಶಸ್ತಿ ಮೊತ್ತ ಹಿಂದಿರುಗಿಸಿ ಸಮಾಜ ಸೇವಕರಿಗೆ ಹಸ್ತಾಂತರ
ಇಂದಿನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಸಸಿಕಾಂತ್ ಸೆಂಥಿಲ್, ನಿಸಾರ್ ಅಹ್ಮದ್ ಹಾಗೂ ಫಾ.ವಿಲಿಯಮ್ ಮಾರ್ಟಿಸ್ ತಮ್ಮ ಪ್ರಶಸ್ತಿ ಮೊತ್ತವನ್ನು ವಾಪಾಸ್ಸು ಮುಸ್ಲಿಮ್ ಒಕ್ಕೂಟಕ್ಕೆ ಅರ್ಪಿಸಿದರು.
ಆದರೆ ಒಕ್ಕೂಟವು ಸಸಿಕಾಂತ್ ಸೆಂಥಿಲ್ ಅವರ ಮೊತ್ತವನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ನಿಸಾರ್ ಅಹ್ಮದ್ ಅವರ ಮೊತ್ತವನ್ನು ಅಣ್ಣಪ್ಪ ನಕ್ರೆ ಹಾಗೂ ಫಾ.ವಿಲಿಯಂ ಮಾರ್ಟಿಸ್ ಅವರ ಮೊತ್ತ ವನ್ನು ಸಮಾಜ ಸೇವಕ ಹಸೈನಾರ್ ಕೋಡಿ ಅವರಿಗೆ ವಿತರಿಸಿದರು.
‘ಸಂವಿಧಾನದ ಮೂಲಕ ಬಲಪಂಥೀಯ ರಾಜಕೀಯಕ್ಕೆ ಹೊಡೆತ’
ಬಲಪಂಥೀಯ ರಾಜಕೀಯವನ್ನು ಎದುರಿಸಲು ನಾವು ಸಂವಿಧಾನವನ್ನು ಮುಂದಿಟ್ಟುಕೊಳ್ಳಬೇಕು. ನಾವು ಸಂವಿಧಾನ ಒಪ್ಪುವವರು ಹಾಗೂ ಒಪ್ಪದವರು ಎಂಬುದಾಗಿ ವಿಭಾಗ ಮಾಡಬೇಕೆ ಹೊರತು ಹಿಂದು ಮುಸ್ಲಿಮ್ ಎಂಬುದಾಗಿ ಅಲ್ಲ. ಇದರಿಂದ ಸಂವಿಧಾನ ಒಪ್ಪುವವರು ದೊಡ್ಡ ಸಂಖ್ಯೆಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ಸಂವಿಧಾನ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲವಾಗುತ್ತದೆ. ನಮ್ಮ ಹಕ್ಕುಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸಂವಿಧಾನಕ್ಕಾಗಿ ನಾವು ಹೋರಾಟ ಮಾಡಬೇಕು. ಅದನ್ನು ಮುಂದಿಟ್ಟು ಕೊಂಡೇ ಬಲಪಂಥೀಯ ರಾಜಕೀಯವನ್ನು ಮುರಿಯಬೇಕು ಎಂದು ಅವರು ತಿಳಿಸಿದರು.