ನಾಳೆ ಮಧುಮೇಹ ಬಾರದಿರಲಿ- ಇಂದೇ ಯುವಜನತೆ ಎಚ್ಚೆತ್ತುಕೊಳ್ಳಿ: ಡಾ. ಪ್ರಸನ್ನಕುಮಾರ್
ಉಡುಪಿ, ನ. 10: ಆಶಿಸ್ತುಮಯ ಜೀವನಶೈಲಿ, ಸ್ಥೂಲಕಾಯ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಇಂದಿನ ಯುವ ಜನಾಂಗದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ತತ್ ಕ್ಷಣ ಜಾಗೃತರಾಗದಿದ್ದಲ್ಲಿ ಯುವಕರ ಬದುಕು ಭವಿಷ್ಯದಲ್ಲಿ ಬಾಧಿತವಾಗಲಿದೆ ಎಂದು ಸೆಂಟರ್ ಫಾರ್ ಡಯಾಬಿಟೀಸ್ ಮತ್ತು ಎಂಡೋಕ್ರೈನ್ ಕೇರ್ ಬೆಂಗಳೂರು ಇದರ ಮುಖ್ಯಸ್ಥರಾದ ಡಾ. ಕೆ.ಎನ್.ಪ್ರಸನ್ನ ಕುಮಾರ್ ಎಚ್ಚರಿಸಿದರು.
ಅವರು ಆದರ್ಶ ಆಸ್ಪತ್ರೆ, ಆದರ್ಶ ಚಾರಿಟೆಬಲ್ ಟ್ರಸ್ಟ್, ಆದರ್ಶ ಸಮೂಹ ಸಂಸ್ಥೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಉಡುಪಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ ಐಎಂಎ, ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ ಉಡುಪಿ ಮಣಿಪಾಲ್ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಜರಗಿದ ಮಧುಮೇಹ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
11 ತಿಂಗಳಿನಿಂದ 25 ವರ್ಷ ವಯೋಮಾನದ ಸುಮಾರು 40 ಸಾವಿರ ಮಧುಮೇಹಿರೋಗಿಗಳಿಗೆ ತಾವು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದ ಅವರು ಹೆತ್ತವರೂ ಮಕ್ಕಳಿಗೆ ಮಧು ಮೇಹದ ಕುರಿತು ಅರಿವು ಮೂಡಿಸಬೇಕೆಂದು ಕೋರಿದರು. ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಅವರು ಜಾಥಾ ಉದ್ಘಾಟಿಸಿ ಮಾತನಾಡಿ ಶುಭ ಸಮಾರಂಭಗಳಲ್ಲಿ ಮಧುಮೇಹಕ್ಕೆ ಪ್ರೇರಕವಾಗಬಲ್ಲ ಪಾಕ ವೈವಿಧ್ಯಗಳು ಒಂದು ಹಂತದಲ್ಲಿ ಮಧುಮೇಹ ಹೆಚ್ಚಳಕ್ಕೆ ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ.ಇದಕ್ಕೆ ಮನೆ ಮನೆಗೆ ತೆರಳಿ ಆರೋಗ್ಯ ಶಿಕ್ಷಣ ನೀಡಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಶಾಸ್ತ್ರಿ, ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಶೋಕ್ , ತಾಲೂಕು ವೈಧ್ಯಾಧಿಕಾರಿ ಡಾ.ವಾಸುದೇವ, ಡಾ.ರಾಮ ರಾವ್, ಐ ಎಂ ಎ ಅಧ್ಯಕ್ಷರಾದ ಸುರೇಶ್ ಶೆಣೈ, ಎಪಿಐ ಉಡುಪಿ ಮಣಿಪಾಲ ಘಟಕದ ಡಾ.ಅನಂತ್ ಶೆಣೈ, ಲಯನ್ಸ್ ಕ್ಲಬ್ ಡಾ.ಅಶೋಕುಮಾರ್ ವೈ.ಜಿ.,ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಮಹ್ಮದ್ ಹನೀಫ್, ವಾಸುದೇವ್ ಉಪಾಧ್ಯ, ಆದರ್ಶ ಆಸ್ಪತ್ರೆಯ ಸಿಇಓ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ. ಎಸ್. ಚಂದ್ರಶೇಖರ್ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಭಾರತ ಇದೀಗ ಹತ್ತು ಕೋಟಿ ಮಧುಮೇಹಿರೋಗಿಗ ಳನ್ನು ಹೊಂದಿದೆ. ಎಚ್ಚೆತ್ತು ಕೊಳ್ಳದಿದ್ದಲ್ಲಿ ಮುಂದೆ ಇನ್ನೂ ಹತ್ತು ಕೋಟಿ ಪೂರ್ವ ಮಧುಮೇಹಿಗಳಾಗುವ ಆತಂಕ ಇದೆ.ಇಂದು 5ಸೆಕೆಂಡಿಗೆ ಓರ್ವ ಡಯಾಬಿಟಿಸ್ ರೋಗಿ ಮೃತ್ಯು ಹೊಂದುತ್ತಿದ್ದಾನೆ. ಡಯಾಬಿಟಿಸ್ ಎಜುಕೇಟರ್ಸ್ ಇಂದಿನ ಅನಿವಾರ್ಯ ಎಂದು ಹೇಳಿದರು. ಆದರ್ಶ ಆಸ್ಪತ್ರೆಯ ಅನುಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಾಗೃತಿ ಜಾಥಾ ಆದರ್ಶ ಆಸ್ಪತ್ರೆಯವರೆಗೂ ನಡೆಯಿತು.