ಉಡುಪಿ ನೇತ್ರಜ್ಯೋತಿ ಇನ್‌ಸ್ಟಿಟ್ಯೂಷನ್ಸ್ ನೂತನ ಕಟ್ಟಡ ಉದ್ಘಾಟನೆ

ಉಡುಪಿ: ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಿನ್ನಿಮೂಲ್ಕಿ ವೇಗಸ್ ಲೇಔಟ್‌ನಲ್ಲಿ ನಿರ್ಮಿಸಲಾದ ನೇತ್ರಜ್ಯೋತಿ ಇನ್‌ಸ್ಟಿಟ್ಯೂಷನ್ಸ್ ಇದರ ನೂತನ ಕಟ್ಟಡವನ್ನು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂದು ಉದ್ಘಾಟಿಸಿದರು.

ಬಳಿಕ ಆಶೀರ್ವಚನ ನೀಡಿದ ಅವರು, ಶ್ರೀಕೃಷ್ಣ ಗೀತೆಯ ಮೂಲಕ ಹೊಸ ಬೆಳಕನ್ನು ನೀಡಿದ್ದಾನೆ. ಮನುಷ್ಯನಿಗೆ ಭಗವಂತ ನೀಡಿದ ಕಣ್ಣುಗಳಿಗೆ ಧಕ್ಕೆಯುಂಟಾದಾಗ ನೇತ್ರ ವೈದ್ಯರ ಸಹಕಾರ ಅಗತ್ಯ. ಕೃಷ್ಣನ ನಾಡಿನಲ್ಲಿ ಮನೆ ಮಾತಾಗಿರುವ ಡಾ.ಕೃಷ್ಣ ಪ್ರಸಾದ್ ನೇತೃತ್ವದ ಪ್ರಸಾದ್ ನೇತ್ರಾಲಯ ಅನೇಕ ಮಂದಿಯ ಕಣ್ಣಿನ ಸಮಸ್ಯೆ ನಿವಾರಿಸುವ ಮೂಲಕ ಅವರ ಬಾಳಿನಲ್ಲಿ ಹೊಸ ಬೆಳಕು ನೀಡಿದೆ. ನೂತನ ಸಂಸ್ಥೆಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.

ನೇತ್ರಜ್ಯೋತಿ ಇನ್‌ಸ್ಟಿಟ್ಯೂಷನ್ಸ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಸಹೋದರ ಹಾಗೂ ಗುಜರಾತ್ ವಡನಗರ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಸೋಮು ಭಾಯ್ ಮೋದಿ ಉದ್ಘಾಟಿಸಿ, ಹಲವು ರಾಜ್ಯಗಳಲ್ಲಿ ನೇತ್ರ ಚಿಕಿತ್ಸೆ ಮೂಲಕ ಬಡವರು, ಜನಸಾಮಾನ್ಯರ ಸೇವೆ ಮಾಡುತ್ತಿರುವ ಡಾ.ಕೃಷ್ಣ ಪ್ರಸಾದ್ ಕಾರ್ಯ ಪ್ರಶಂಸನೀಯ ಎಂದರು.

ಕಾಲೇಜ್ ಆಫ್ ಫಿಸಿಯೊಥೆರಪಿಯನ್ನು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್, ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅನಾಟಮಿ ವಿಭಾಗವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ ಭಟ್, ಫಿಸಿಯೊಲಾಜಿ ವಿಭಾಗವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ರಘುಪತಿ ಭಟ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಲೋಕೋಪಯೋಗಿ ಇಲಾಖೆ ನಿವೃತ್ತ ಅಧಿಕಾರಿ ಟಿ.ಸುಕುಮಾರ್, ಶಶಿಧರ ರಾವ್, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥ ರಘುರಾಮ ರಾವ್, ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

ಟ್ರಸ್ಟ್‌ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ನೇತ್ರ ತಜ್ಞ ಡಾ.ಕೃಷ್ಣಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಗೌರಿ ಪ್ರಭು ವಂದಿಸಿದರು.

ಡಾ.ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!