ಶಾಸಕರೇ ಪುಂಡಾಟಿಕೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಿ- ರಮೇಶ್ ಕಾಂಚನ್

ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಭೂಮಿ ವಿವಾದ ವಿಚಾರದಲ್ಲಿ ಪ್ರತಿಭಟನೆ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದಲ್ಲಿ ಪೊಲೀಸರೊಂದಿಗೆ ತಳ್ಳಾಟ ನೂಕಾಟ ನಡೆಸಿ ಅಸಭ್ಯವಾಗಿ ವರ್ತಿಸಿರುವುದು ಶಾಸಕ ಸ್ಥಾನಕ್ಕೆ ಮಾಡಿರುವ ಅಪಮಾನ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು ನೀಡಿದ್ದು ಕಾನೂನು ಚೌಕಟ್ಟಿನಡಿಯಲ್ಲಿ ಪ್ರತಿಭಟನೆ ನಡೆಸಬೇಕೇ ಹೊರತು ಪ್ರತಿಭಟನೆಯ ಹೆಸರಿನಲ್ಲಿ ಪುಂಡಾಟಿಕೆ ಮೆರೆಯುವುದು ಶಾಸಕರಿಗೆ ಶೋಭೆ ತರುವಂತಹ ವಿಚಾರವಲ್ಲ. ಪ್ರತಿ ಬಾರಿ ಒಂದಲ್ಲ ಒಂದು ವಿಚಾರದಲ್ಲಿ ಪುಂಡಾಟ ಮೆರೆಯುವ ಶಾಸಕರು ತಮ್ಮ ಸ್ಥಾನದ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಡಾ. ವಿ ಎಸ್ ಆಚಾರ್ಯ, ಓಸ್ಕರ್ ಫೆರ್ನಾಂಡಿಸ್, ಜಯಪ್ರಕಾಶ್ ಹೆಗ್ಡೆ, ಗೋಪಾಲ ಭಂಡಾರಿ, ವಿನಯ್ ಕುಮಾರ್ ಸೊರಕೆ, ಹಲವಾರು ಮಂದಿ ಶಾಸಕ, ಸಂಸದರಾಗಿ ಸೇವೆ ಸಲ್ಲಿಸಿದ್ದು ಎಂದು ಕೂಡ ತಮ್ಮ ಸಭ್ಯತೆಯನ್ನು ಮರೆಯದೆ ಸಮಾಜಕ್ಕೆ ಮಾದರಿಯಾಗಿದ್ದರು. ಆದರೆ ಉಡುಪಿಯ ಈಗಿನ ಶಾಸಕರು ತಮ್ಮ ಅಸಭ್ಯ ವರ್ತನೆಗಳ ಮೂಲಕ ಜಿಲ್ಲೆಯ ಮಾನವನ್ನು ಹರಾಜು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳು ಮನವಿ ಸ್ವೀಕಾರಕ್ಕೆ ಬರಲು ಕೆಲವು ನಿಮಿಷಗಳು ವಿಳಂಬವಾಗಿರುವುದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ ಸಮವಸ್ತ್ರದಲ್ಲಿದ್ದ ಕಾನೂನು ಪಾಲಕರನ್ನು ತಳ್ಳಿ ಜಿಲ್ಲಾಧಿಕಾರಿಗಳ ಕಛೇರಿಗೆ ನುಗ್ಗುವ ಪ್ರಯತ್ನ ಮಾಡಿದ್ದಲ್ಲದೆ ಪೊಲೀಸರೊಂದಿಗೆ ತಳ್ಳಾಟ ನಡೆಸಿರುವುದು ಮೂರ್ಖತನದಪರಮಾವಧಿಯಾಗಿದೆ.
ಕ್ಷೇತ್ರದಲ್ಲಿ ಇರುವ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸದೆ ಕೇವಲ ಗೂಂಡಾ ಪ್ರವೃತ್ತಿ ಮೆರೆಯುತ್ತಿರುವುದುಕ್ಷೇತ್ರದ ಜನತೆಯ ದೌರ್ಭಾಗ್ಯವೇ ಸರಿ. ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ ಕ್ಷೇತ್ರದ ಜನತೆ ಇಂದು ಪರಿತಪಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯ ರಸ್ತೆಗಳು ಡಾಮರು ಕಾಣದೆ ಹೊಂಡಮಯವಾಗಿದೆ, ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ, ಸಂತೆಕಟ್ಟೆ ರಸ್ತೆಕಾಮಗಾರಿ, ಇಂದ್ರಾಳಿ ಬ್ರಿಡ್ಜ್ ಕಾಮಾಗಾರಿ ಪ್ರತಿಯೊಂದು ಕೂಡ ಆಮೆಗತಿಯಲ್ಲಿ ಸಾಗುತ್ತಿದ್ದು ಇದರಿಂದ ನಿತ್ಯ ಸಂಚರಿಸುವ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ದಮ್ಮು ತಾಕತ್ತು ಇದ್ದರೆ ಮೊದಲು ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿ.

ಹಾಗೆಯೇ ವಕ್ಫ್ ಆಸ್ತಿ ಒತ್ತುವರಿ ತೆರವು ಗೊಳಿಸಲು 2019 ರಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೋಟಿಸ್ ಜಾರಿಮಾಡಿ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ಬಗ್ಗೆಯೂ ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯಿಸಲಿ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!