ನ.9ರಂದು ಆಣೆ ಪ್ರಮಾಣಕ್ಕೆ ಸಂತ್ರಸ್ತರೂ ಸಿದ್ಧ: ಮಾಜಿ ಶಾಸಕ ರಘುಪತಿ ಭಟ್

Oplus_131072

ಉಡುಪಿ, ನ.7: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ ಕೋಟ್ಯಂತರ ರೂ. ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರು ಪತ್ರ ಬರೆದು ನ.9ರಂದು ಬೆಳಗ್ಗೆ 9.30ಕ್ಕೆ ಕರಂಬಳ್ಳಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಆಹ್ವಾನ ನೀಡಿದ್ದು, ನನ್ನ ಮಧ್ಯಸ್ಥಿಕೆಯಲ್ಲಿ ಸಂತ್ರಸ್ತರು ಕೂಡ ಆ ದಿನದಂದು ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಮಣಿಪಾಲದಲ್ಲಿಂದು ನೂರಾರು ಸಂತ್ರಸ್ತರೊಂದಿಗೆ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಣೆ ಪ್ರಮಾಣದ ವೇಳೆ ಸಂತ್ರಸ್ತರ ಸಹಿ ಇರುವ ಸಾಲ ಪತ್ರವನ್ನು ಕೂಡ ಬ್ಯಾಂಕಿನವರು ತೆಗೆದುಕೊಂಡು ಬರಬೇಕು. ಅಲ್ಲದೆ ಸಾಲ ಕೊಡುವ ಸಂದರ್ಭದಲ್ಲಿದ್ದ ಆಡಳಿತ ಮಂಡಳಿ, ಸಿಬ್ಬಂದಿ ಕೂಡ ಹಾಜರು ಇರಬೇಕು. ಈ ಮೂಲಕ ಸತ್ಯಾಸತ್ಯತೆ ಹೊರಬರಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಮೂರು ವಿಧದಲ್ಲಿ ಗ್ರಾಹಕರಿಗೆ ವಂಚನೆ!: ಆಗಿನ ಮಲ್ಪೆ ಶಾಖೆಯ ವ್ಯವಸ್ಥಾಪಕ ಸುಬ್ಬಣ್ಣ ಎಂಬವರೇ ಬ್ರೋಕರ್ ಮೂಲಕ ಸಂತ್ರಸ್ತರಿಗೆ ಮನೆಗೆ ಬಂದು ಕೇವಲ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆದು 20 ಸಾವಿರ ರೂ. ನಗದು ಸಾಲ ನೀಡಿದ್ದಾರೆ. ಇದಕ್ಕೆ ಯಾರಿಂದಲೂ ಯಾವುದೇ ಸಹಿ ಪಡೆದುಕೊಂಡಿಲ್ಲ. ಆದರೆ ಅವರಿಗೆ ಈಗ 2-3ಲಕ್ಷ ರೂ. ಸಾಲ ಬಾಕಿ ಇದೆ ಎಂದು ನೋಟೀಸ್ ನೀಡಿ, ಮನೆಗೆ ಹೋಗಿ ಕಿರುಕುಳ ನೀಡಲಾಗುತ್ತಿದೆ ಎಂದು ರಘುಪತಿ ಭಟ್ ತಿಳಿಸಿದರು.

ಅದೇ ರೀತಿ ಮೀನುಗಾರರ ಸಾಲ ಎಂದು ಹೇಳಿ ಕೆಲವರಿಂದ ಚೆಕ್ ತೆಗೆದು, ಸಹಿ ಪಡೆದುಕೊಳ್ಳಲಾಗಿದೆ. ಇವರಿಗೆ ನಯಾ ಪೈಸೆ ಸಿಕ್ಕಿಲ್ಲ. ಆದರೆ 3ಲಕ್ಷ ರೂ. ಸಾಲ ಪಾವತಿಸುವಂತೆ ಇವರಿಗೂ ನೋಟೀಸ್ ಬಂದಿದೆ. ಅಲ್ಲದೆ ಇವರ ಸಹಿಯನ್ನು ಬಳಸಿ ಹಣವನ್ನು ಡ್ರಾ ಮಾಡಲಾಗಿದೆ ಎಂದರು.

ಮೂರನೇ ಕೆಟಗರಿಯಲ್ಲಿ ಕೆಲವರು ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲದ ಪತ್ರಕ್ಕೆ ಸಹಿ ಮಾಡಿ 20ಸಾವಿರ, 40ಸಾವಿರ, 80ಸಾವಿರ ಹಾಗೂ ಒಂದು ಲಕ್ಷ ರೂ. ವರೆಗೆ ಸಾಲ ಪಡೆದುಕೊಂಡಿದ್ದಾರೆ. ಅವರ ಮನೆಗೆ ಬಂದು ಸಾಲವನ್ನು ನೀಡಲಾಗಿದೆ. ಇದರಲ್ಲಿ ಹೆಚ್ಚಿನವರು ಸಾಲದ ಹಣವನ್ನು ಮರು ಪಾವತಿಸಿದ್ದಾರೆ. ಆದರೂ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಸಾಲ ನೀಡಿದ ವ್ಯವಸ್ಥಾಪಕ ಸುಬ್ಬಣ್ಣ ಹಲವು ಸಮಯಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಸಾಲ ನೀಡಿರುವುದನ್ನು ಅವರು ಆಡಳಿತ ಮಂಡಳಿಯ ಎದುರೇ ಒಪ್ಪಿಕೊಂಡಿದ್ದಾರೆ. ಆದುದರಿಂದ ಇದಕ್ಕೆ ಆಡಳಿತ ಮಂಡಳಿ ಕೂಡ ಜವಾಬ್ದಾರಿಯಾಗಿದೆ. ಈ ಅವ್ಯವಹಾರಗಳ ಅರಿವಿಲ್ಲ ಎಂದು ಹೇಳಿದರೆ ಅದು ಆಡಳಿತ ಮಂಡಳಿಯ ಬೇಜವಾಬ್ದಾರಿಯಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ನಾಗೇಂದ್ರ ಪುತ್ರನ್ ಕೋಟ ಹಾಗೂ ಸಂತ್ರಸ್ತರು ಹಾಜರಿದ್ದರು.

ಎಸ್‌ಐಟಿ ರಚಿಸಿ ತನಿಖೆಗೆ ಆಗ್ರಹ

ಸಂತ್ರಸ್ತರು ತಾವು ಪಡೆದ ಸಾಲದ ಹಣವನ್ನು ಬಡ್ಡಿ ಸಮೇತ ಮರು ಪಾವತಿಸಲು ಸಿದ್ಧರಿದ್ದಾರೆ. ಉಳಿದ ಹಣವನ್ನು ವಂಚನೆ ಮಾಡಿದವರಿಂದ ವಸೂಲಿ ಮಾಡಬೇಕು. ಇಲ್ಲದಿದ್ದರೆ ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ರಘುಪತಿ ಭಟ್ ಆಗ್ರಹಿಸಿದರು.

ಈ ಅವ್ಯವಹಾರದ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಿ, ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿ ತನಿಖೆ ನಡೆಸಬೇಕು. ಆ ಮೂಲಕ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದರು. ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಠಿಯಿಂದ ಕಾನೂನು ಹೋರಾಟಕ್ಕೆ ವಕೀಲರ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!