ನ.10: ಮೂಡುಬಿದಿರೆಯಲ್ಲಿ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ

ಉಡುಪಿ: ಕರಾವಳಿ ಮೂಲದ ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ”ಗದ್ದಿಗೆ“ ಕರಾವಳಿ ಮರಾಟಿ ಸಮಾವೇಶವನ್ನು ನ. 10ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಮಾರಾಟಿ ಸಮಾವೇಶದ ಗೌರವಾಧ್ಯಕ್ಷ ಡಾ.ಕೆ. ಸುಂದರ್ ನಾಯ್ಕ್ ತಿಳಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಹಾಗೂ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. “ಗದ್ದಿಗೆ” ಸ್ಮರಣ ಸಂಚಿಕೆಯನ್ನು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ನಿರ್ದೇಶಕ ಡಾ. ಎಂ.ಮೋಹನ್ ಆಳ್ವ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಗು ವುದು ಎಂದರು.

ನ.9ರಂದು ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇವರ ಸಹಕಾರದಿಂದ ಮರಾಟಿಗರಿಗಾಗಿಯೇ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಈಗಾಗಲೇ 1500ಕ್ಕೂ ಹೆಚ್ಚು ಮರಾಟಿ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

ಸ್ಪೀಕರ್ ಯು.ಟಿ.ಖಾದರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ಉಮಾನಾಥ ಕೋಟ್ಯಾನ್, ಐವನ್ ಡಿ’ಸೋಜಾ, ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಶಶಿಧರ್ ಶೆಟ್ಟಿ ಬರೋಡಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ಎಂ. ಮೋಹನ್ ಆಳ್ವ, ಎನ್.ಎಸ್.ಮಂಜುನಾಥ್, ರತಿ ಪ್ರಭಾಕರ ನಾಯ್ಕ್, ಹಾಗೂ ಪ್ರವೀಣ್ ಕುಮಾರ್ ಮುಗುಳಿ
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕೆನರಾ ಬ್ಯಾಂಕ್ ಜಿ.ಎಂ. ರಾಮ ನಾಯ್ಕ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ನರಸಿಂಹ ನಾಯ್ಕ್, ರಾಘವ ನಾಯ್ಕ್, ವಾಸು ನಾಯ್ಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!