ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣ ಪ್ರಾರಂಭ ಇಂದಿನ ಅಗತ್ಯ: ಡಾ. ಎಚ್.ಎಸ್.ಬಲ್ಲಾಳ್

ಉಡುಪಿ : ನಾಡಿನ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು 60ರ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆ ಇದೀಗ ಶಾಲಾ ಕಾಲೇಜುಗಳ ಮಕ್ಕಳಿಗೆ ರಂಗಶಿಕ್ಷಣ ನೀಡುವ ಮಹಾತ್ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಪ್ರಶಂಸನೀಯ ಎಂದು ಮಾಹೆಯ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿಯ ಗೌರವಾಧ್ಯಕ್ಷರೂ ಆಗಿರುವ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.

ಅವರು ಭಾನುವಾರ ಕುಂಜಿಬೆಟ್ಟಿನ ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಗೀತಾಂಜಲಿ ಸಭಾಂಗಣದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ತನ್ನ 60ರ ಸಂಭ್ರಮಾಚರಣೆಯನ್ನು ಉದ್ಘಾಟಿಸಿ, ರಂಗಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ. ತಲ್ಲೂರು ಶಿವರಾಮ ಶೆಟ್ಟರು ಉಡುಪಿಯ ಸಾಂಸ್ಕೃತಿಕ, ರಂಗಭೂಮಿ, ಜಾನಪದ, ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾದದ್ದು. ಪ್ರಚಾರದ ಉದ್ದೇಶವಿಲ್ಲದೆ, ನಿಸ್ವಾರ್ಥವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಂಗಭೂಮಿಯನ್ನು ಜನರ ಬಳಿಗೆ ಕರೆದೊಯ್ಯುವ ಅವರ ಪ್ರಯತ್ನಕ್ಕೆ ಮಾಹೆ ಸಂಸ್ಥೆ ಸಕಲ ಬೆಂಬಲ ನೀಡಲಿದೆ ಎಂದ ಅವರು, ನಾಡಿನ ಖ್ಯಾತ ನಟರುಗಳೆಲ್ಲಾ ರಂಗಭೂಮಿ ಹಿನ್ನಲೆಯಿಂದ ಬಂದವರೇ ಆಗಿರುವುದು ಈ ರಂಗದ ಮಹತ್ವವನ್ನು ಸಾರುತ್ತದೆ ಎಂದು ಅವರು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣವನ್ನು ಮಕ್ಕಳಿಗೆ ನೀಡಿ ಅವರಲ್ಲಿ ನಾಟಕಗಳತ್ತ ಆಸಕ್ತಿ ಮೂಡಿಸಿದರೆ ಭವಿಷ್ಯದಲ್ಲಿ ರಂಗಭೂಮಿಗೆ ಉತ್ತಮ ಭವಿಷ್ಯವಿದೆ. ಇದು ಇಂದಿನ ಅಗತ್ಯವೂ ಹೌದು, ಈ ನಿಟ್ಟಿನಲ್ಲಿ ರಂಗಭೂಮಿಯ ಈ ಕಾರ್ಯ ಸ್ತುತ್ಯಾರ್ಹ ಎಂದು ಅವರು ಪ್ರಶಂಸಿದರು.

ರoಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ರಂಗಭೂಮಿ ಯನ್ನು ಕಟ್ಟಿ ಬೆಳೆಸಿದ ದಿ.ಆನಂದ ಗಾಣಿಗ ಅವರ ಕೋರಿಕೆ ಮೇರೆಗೆ ಆರಂಭದಲ್ಲಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ೬೦ ವರ್ಷ ಎಂಬುದು ಮಾನವರಿಗೆ ವೃದ್ಧಾಪ್ಯ ಎನ್ನುವುದಾದರೆ, ಸಂಘಸoಸ್ಥೆಗಳಿಗೆ ಅದು ಯೌವ್ವನಾವಸ್ಥೆಯಾಗಿದೆ. ಉಡುಪಿಯಲ್ಲಿ ಖ್ಯಾತಿ ಪಡೆದ ಯಕ್ಷ ಶಿಕ್ಷಣದಂತೆ ಮಕ್ಕಳಿಗೂ ಶಾಲಾ ಕಾಲೇಜು  ಹಂತದಲ್ಲಿ ರಂಗ ಶಿಕ್ಷಣ ನೀಡಬೇಕು ಎನ್ನುವ ಮಹಾತ್ವಾಕಾಂಕ್ಷೆಯಡಿ ರಂಗಶಿಕ್ಷಣ ಹಾಗೂ ರಂಗ ಭಾಷೆ ಎಂಬ ಯೋಜನೆ ಗಳನ್ನು ರಂಗಭೂಮಿ ಹಮ್ಮಿಕೊಂಡಿದೆ ಎಂದರು.

ಕಲೆ ಎಂಬುದು ವಂಶಪಾರoಪರ್ಯವಾಗದೆ, ಆಸಕ್ತರೂ ರಂಗಶಿಕ್ಷಣ ಕಲಿಯಬೇಕು ಎನ್ನುವ ಹಂಬಲವಿದ್ದಲ್ಲಿ ರಂಗಭೂಮಿ ಅವರಿಗೆ ವೇದಿಕೆಯಾಗಲಿದೆ. ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರಂತಹ ಕಲಾ ಪ್ರೋತ್ಸಾಹಕರಿರುವಾಗ ಹೊಸ ಯೋಜನೆಗಳನ್ನು ಪರಿಚಯಿಸಲು ನಮಗೆ ಸಂತೋಷವಾಗುತ್ತದೆ. ಪ್ರಸ್ತುತ ಉಡುಪಿಯ 13 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ.ತಲ್ಲೂರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ರಂಗಶಿಕ್ಷಣ ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರೌಢಶಾಲೆಯ ಮುಖ್ಯೋಪಾಧ್ಯಯರುಗಳಿಗೆ, ರಂಗ ನಿರ್ದೇಶಕರು ಗಳಿಗೆ, ರಂಗಭಾಷೆ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವ ಕಾಲೇಜು ಪ್ರಾಂಶುಪಾಲರಿಗೆ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು, ಎಸ್.ರಾಜಗೋಪಾಲ ಬಲ್ಲಾಳ್, ಸಹ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ರಂಗಭೂಮಿ ಉಡುಪಿ ಹಮ್ಮಿಕೊಂಡ ‘ರಂಗ ಶಿಕ್ಷಣ’ ಯೋಜನೆಯ ಸಂಚಾಲಕ ವಿದ್ಯಾವಂತ ಆಚಾರ್ಯ ಮಾತನಾಡಿ, ಮಕ್ಕಳಲ್ಲಿ ವಿಭಿನ್ನ ಕೌಶಲಗಳನ್ನು ಬೆಳೆಸುವ ಉದ್ದೇಶ ಈ ರಂಗಶಿಕ್ಷಣದಿoದ ಸಾಕಾರ ಗೊಳ್ಳಲಿದೆ. ಮುಂದೆ ಇನ್ನಷ್ಟು ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಚಿಂತನೆಯಿದೆ ಎಂದರು.

ಸಹ ಸಂಚಾಲಕ ರವಿರಾಜ ನಾಯಕ್ ಮಾತನಾಡಿ, ರಂಗಶಿಕ್ಷಣ ಪಡೆಯಲು ಆರಂಭದಲ್ಲಿ ಸುಮಾರು ೧೮ ಶಿಕ್ಷಣ ಸಂಸ್ಥೆಗಳು ಮುಂದೆ ಬಂದರೂ, ಗುರುಗಳು ಹಾಗೂ ಸಂಪನ್ಮೂಲಗಳ ಹೊಂದಾಣಿಕೆಯ ದೃಷ್ಟಿಯಿಂದ ಪ್ರಸ್ತುತ 13 ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ ಖ್ಯಾತ ರಂಗಕರ್ಮಿಗಳನ್ನು ಗುರುಗಳನ್ನಾಗಿ ನಿಯೋಜಿಸಲಾಗಿದೆ. ಇವೆಲ್ಲಾದರ ವೆಚ್ಚವನ್ನು ರಂಗಭೂಮಿ ಸಂಸ್ಥೆ ಭರಿಸಲಿದೆ ಎಂದರು. ‘ರಂಗಭಾಷೆ ‘ಕಾರ್ಯಕ್ರಮದ ಸಂಚಾಲಕ ಎಚ್.ಜಯಪ್ರಕಾಶ್ ಕೆದ್ಲಾಯ ಮಾಹಿತಿ ನೀಡಿ, ಉಡುಪಿಯನ್ನು ಒಂದು ಸಾಂಸ್ಕೃತಿಕ ನಗರಿಯಾಗಿ ಬೆಳೆಯುವಲ್ಲಿ ರಂಗಭೂಮಿ ಉಡುಪಿಯ ಕೊಡುಗೆ ಅಪಾರವಿದೆ. ರಂಗಭಾಷೆ ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ರಂಗಾವಕಾಶಗಳ ನ್ನು ತೆರೆದಿಡಲಿದೆ ಎಂದು ಅಭಿಪ್ರಾಯ ಪಟ್ಟರು.

ಯುವ ಜನರು ಮತ್ತು ಮಕ್ಕಳಲ್ಲಿ ರಂಗಭೂಮಿಯ ಕುರಿತು ಅರಿವು ಮೂಡಿಸಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಉಡುಪಿಯ ಆಯ್ದ ಪ್ರೌಢಶಾಲೆಗಳಲ್ಲಿ ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ರಂಗ ತರಬೇತಿ ಮತ್ತು ನಾಟಕ ನಿರ್ಮಾಣ ವನ್ನು ರಂಗಶಿಕ್ಷಣ ಮತ್ತು ರಂಗಭಾಷೆಯ ಮೂಲಕ ಕೈಗೆತ್ತಿಕೊಳ್ಳಲಾಗುವುದು. ಇಲ್ಲಿ ರಚನೆಗೊಂಡ ನಾಟಕಗಳನ್ನು ಶಾಲಾ ವಾರ್ಷಿಕೋತ್ಸವದಲ್ಲಿ ಹಾಗೂ ರಂಗಭೂಮಿ ಉಡುಪಿ ಸಂಸ್ಥೆ ಮುಂಬರುವ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಿರುವ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಗುವುದು. ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಂಗಭೂಮಿ ರಸಗ್ರಹಣ ಶಿಬಿರ ಆಯೋಜಿಸಲಾಗಿದೆ. ಈ ಕಾರ್ಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಕೈ ಜೋಡಿಸಲಿದೆ. ಈ ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಸಿದ್ಧ ರಂಗಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಕೆ.ಜೆ.ಕೃಷ್ಣ ಮೂರ್ತಿ, ಶ್ವೇತಾ ಎಚ್.ಕೆ. ಮೊದಲಾದ ಸಂಪನ್ಮೂಲ ವ್ಯಕ್ತಿಗಳಾಗಿ ಕೈ ಜೋಡಿಸಲಿದ್ದಾರೆ. ಈ ನಿಟ್ಟಿನಲ್ಲಿ ನ.16ರಿಂದ 18ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ 3 ದಿನಗಳ ವಸತಿ ಸಹಿತ ಶಿಬಿರ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!