ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತಿದೆಯೇ ಎಂದು ಖಚಿತ ಪಡಿಸಿಕೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 8 ರಿಂದ 10 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರಿಗೆ  ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. 

ವಿಷ್ಣು ಭರತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ವಿಶ್ವನಾಥ್ ಶೆಟ್ಟಿ ಅವರನ್ನೊಳಗೊಂಡ ಪೀಠ ಸರ್ಕಾರ ನೀಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಮಾರಾಟಗಾರರು ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.

ಹಸಿರು ಪಟಾಕಿ ಬಗ್ಗೆ ಸರ್ಕಾರ ನೀಡಿದ್ದ ತಪ್ಪು ವ್ಯಾಖ್ಯಾನ ಸರಿಪಡಿಸಿ ನಂತರ ಎಲ್ಲಾ ಮಾರ್ಗ ಸೂಚಿಗಳು ಪಾಲನೆಯಾಗುತ್ತಿವೆಯೇ ಎಂಬ ಪರಿಶೀಲಿಸುವಂತೆ ಸೂಚಿಸಿದೆ. ಹಸಿರು ಪಟಾಕಿ ಬಾಕ್ಸ್‌ಗಳ ಮೇಲೆ‌ NEERI ಮತ್ತು PESO ಲಾಂಛನ ಇರುತ್ತದೆ. ನಿಮ್ಮ ಮೊಬೈಲ್​ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು.

ಹಸಿರು ಪಟಾಕಿ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ, ಏಕೆಂದರೆ ಸಾರ್ವಜನಿಕರಿಗೆ ಇದರ ಬಗ್ಗೆ ಸರಿಯಾದ ಅರಿವಿರಲಿಲ್ಲ,  ಹೀಗಾಗಿ ಸರ್ಕಾರ ಹಸಿರು ಪಟಾಕಿ ಬಗ್ಗೆ  ಮಾಧ್ಯಮದಲ್ಲಿ ಜಾಹೀರಾತು ಮತ್ತು ಪಬ್ಲಿಸಿಟಿ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಎಲ್ಲಾ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ಆಯಾ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಸ್ಟಾಲ್‌ಗಳು ಹಸಿರು ಕ್ರ್ಯಾಕರ್‌ಗಳನ್ನು ಮಾತ್ರ ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಲಿಸಬೇಕು ಮತ್ತು ತಕ್ಷಣ ಹಾಜರಾಗುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಪೊಲೀಸರ ಕರ್ತವ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ, ಶಬ್ದ ಮಟ್ಟವನ್ನು ಅಳೆಯಲು ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರೊಂದಿಗೆ ಡೆಸಿಬೆಲ್ ಮೀಟರ್ ಲಭ್ಯವಾಗುವಂತೆ ಕೆಎಸ್‌ಪಿಸಿಬಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ನ್ಯಾಯಾಲಯವು ಸಹಿ ಮಾಡುವವರೆಗೆ ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವವರೆಗೆ ಕಾಯದೆ, ಕೆಎಸ್‌ಪಿಸಿಬಿ ಮತ್ತು ಬಿಬಿಎಂಪಿಯನ್ನು ನ್ಯಾಯಾಲಯದ ಆದೇಶವನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ತಿಳಿಸುವಂತೆ ನ್ಯಾಯಪೀಠ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!