ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೈದ ಬ್ಯೂಟಿ ಪಾರ್ಲರ್ ಮಾಲಕಿಯ ಮತ್ತೊಂದು ಕೃತ್ಯದ ಬಗ್ಗೆ ಶಂಕೆ!

ಉಡುಪಿ: ಕಾರ್ಕಳದ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಂದ ಪ್ರಕರಣವನ್ನು ಪೊಲೀಸರು ತೀವ್ರಗೊಳಿಸುತ್ತಿದ್ದರೆ, ಇನ್ನೊಂದೆಡೆ ವೇಳೆ ತನಿಖೆಯ ದಾರಿ ತಪ್ಪಿಸುವ ಕೆಲಸ ನಡೆಯುತ್ತಿರುವುದು ಬಯಲಾಗಿದೆ.

ಪ್ರಕರಣದ ಎರಡನೇ ಆರೋಪಿ ಆರ್ಥಿಕವಾಗಿ ಬಲಡ್ಯನಾಗಿದ್ದು, ತನಿಖೆಯನ್ನು ಹಳ್ಳ ಹಿಡಿಸುವ ಕೆಲಸ ನಡೆಯುತ್ತಿದೆ ಎಂದು ಮೃತ ಬಾಲಕೃಷ್ಣ ಪೂಜಾರಿ ಸಹೋದರ ಪ್ರಕಾಶ್‌ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕೃಷ್ಣ ಪೂಜಾರಿ ಸಾವಿಗೂ ಮುನ್ನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ ಸ್ಲೋ ಪಾಯಿಸನ್ ನೀಡುತ್ತಿದ್ದರು. ಆದರೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಯಾಕೆ ಅದು ಗೊತ್ತಾಗಲಿಲ್ಲ? ಸ್ಲೋ ಪಾಯಿಸನ್ ವಿಷಯವನ್ನು ಆಸ್ಪತ್ರೆಯವರು ಮುಚ್ಚಿಟ್ಟಿದ್ದು ಯಾಕೆ? ಎಂದು ಸಹೋದರ ಪ್ರಕಾಶ್‌ ಪೂಜಾರಿ ಪ್ರಶ್ನೆ ಮಾಡಿದ್ದಾರೆ.

ಎರಡನೇ ಆರೋಪಿ ಪ್ರತಿಮಾ ಪ್ರಿಯಕರ ದಿಲೀಪ್ ಹೆಗ್ಡೆ ಪ್ರಭಾವಿ ವ್ಯಕ್ತಿಯಾಗಿದ್ದು ಕಾರ್ಕಳದಲ್ಲಿ ಲಾಡ್ಜ್‌ ಮಾಲಕ ಹಾಗೂ ಈಭಾಗದ ಪ್ರತಿಷ್ಠಿತ ವ್ಯಕ್ತಿಯ ಮಗನಾಗಿದ್ದಾನೆ.

ಪೊಲೀಸ್‌ ಇಲಾಖೆಯ ಮೇಲೆ ದಿಲೀಪ್ ಕುಟುಂಬದವರು ಪ್ರಭಾವ ಬೀರುವ ಆತಂಕ ನಮಗೆ ಇದೆ. ಸರಿಯಾದ ತನಿಖೆ ನಡೆಸಬೇಕು ಎಂದು ಡಿವೈಎಸ್ಪಿಗೆ ಆಗ್ರಹ ಮಾಡಿದ್ದೇವೆ.

ಪೊಲೀಸರು ಯಾವುದೇ ಆಮಿಷಗಳಿಗೆ ಒಳಗಾಗದೆ ಸರಿಯಾದ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ನ್ಯಾಯಬೇಕು. ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗ ಬೇಕು. ಆಗದಿದ್ದರೆ ಸಮಾಜಕ್ಕೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ ಎಂದರು.

ಸಹೋದರನಿಗೂ ವಿಷ ಪ್ರಾಶನ ಮಾಡಿಸಿದ್ದಾಳೆಯೇ ರೀಲ್ಸ್ ರಾಣಿ….?

ಪ್ರತಿಮಾಳ ಘನಘೋರ ಕೃತ್ಯವನ್ನು ಬಯಲಿಗೆ ತಂದವರೇ ಸಹೋದರ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಪ್ರತಿಮಾಳ ಸಂಚು ಬಯಲು ಮಾಡಿದ್ದರು. ಅಲ್ಲದೆ, ಈ ಪ್ರಕರಣದ ಪ್ರಮುಖ ಸಾಕ್ಷಿ ಕೂಡ ಅವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸಹೋದರನಿಗೂ ವಿಷ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ‌. ಸಹೋದರ ಸಂದೀಪ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿರುವುದು ಎಷ್ಟೆಲ್ಲ ಸಂಶಯಕ್ಕೆ ಕಾರಣ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಅವರು, ನನ್ನ ಆರೋಗ್ಯದಲ್ಲೂ ಕೆಲವು ತಿಂಗಳಿನಿಂದ ವ್ಯತ್ಯಾಸ ಉಂಟಾಗುತ್ತಿದೆ. ಸ್ನಾಯು ಸೆಳೆತ, ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೇನೆ. ಮಗುವಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಊಟ ಮಾಡಿದ್ದೆ. ಹೀಗಾಗಿ ನನಗೂ ನನ್ನ ತಂಗಿ ವಿಷವುನಿಸಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ನಾನು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುತ್ತೇನೆ ಎಂದರು. ನನ್ನ ಸಹೋದರಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಗೆ ಕಠಿಣ ಶಿಕ್ಷೆ ಆಗಬೇಕು. ಇಬ್ಬರಿಗೂ ಜೀವಾವಧಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕೊಲೆ ಪ್ರಕರಣ ಬಯಲಿಗೆ ಬಂದಾಗ ಅನಾಮಿಕ ಕರೆ ಬಂದಿತ್ತು. ವಿಷಯವನ್ನು ರಾಜಿ ಮಾಡಿಕೊಳ್ಳೋಣ, ನಿನಗೆ ಹಣ ಕೊಡುತ್ತೇವೆ ಎಂದಿದ್ದರು. ಇಪ್ಪತ್ತು ಲಕ್ಷ ರೂಪಾಯಿ ನೀಡುತ್ತೇವೆ ಎಂದು ಆಮಿಷಯೊಡ್ಡಿದ್ದರು. ಯಾರು ಕರೆ ಮಾಡಿದ್ದಾರೋ ಗೊತ್ತಿಲ್ಲ, ಸಾವಿನ ದು:ಖದಲ್ಲಿ ನಲ್ಲಿ ನಾನು ಗಮನ ಕೊಟ್ಟಿಲ್ಲ. ಮಕ್ಕಳ ಭವಿಷ್ಯ ನೋಡಿಕೊಳ್ಳೋಣ ಎಂದು ಹೇಳಿದ್ದರು. ಆದರೆ ಈ ಪ್ರಕರಣದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!