20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್ ಖರೀದಿಯ ನೋಂದಣಿ ಶುಲ್ಕ ಶೇ.2 ರಷ್ಟು ಇಳಿಕೆಗೆ ಸಚಿವ ಸಂಪುಟ ನಿರ್ಧಾರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು 20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲಾಟ್‌ಗಳ ನೋಂದಣಿ ಶುಲ್ಕದ ದರವನ್ನು ಶೇಕಡಾ  5ರಿಂದ ಶೇಕಡಾ 3ಕ್ಕೆ ಇಳಿಸಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಕೈಗಾರಿಕಾ ಭೂಮಿಯ ನೊಂದಣಿ ಶುಲ್ಕ ಶೇಕಡಾ  5 ಇದ್ದು ಅದನ್ನು ಶೇಕಡಾ 3ಕ್ಕೆ ಇಳಿಸಲಾಗಿದೆ. 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್‌ ಗಳ ನೋಂದಣಿಯಲ್ಲೂ ಶೇಕಡಾ 3ಕ್ಕೆ ಇಳಿಸಲು ನಿರ್ಧರಿಸಲಾಗಿದೆ. 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಫ್ಲಾಟ್‌ ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. 

ಈ ಸಮಿತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಉನ್ನತ ಶಿಕ್ಷಣ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಸೇರಿ ಒಟ್ಟು ಆರು ಸಚಿವರು ಸದಸ್ಯರಾಗಿರುತ್ತಾರೆ. ಅರಣ್ಯ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಬದಲಾವಣೆ ಆಗಿರುವ ಕಾರಣ ಸಂಪುಟ ಉಪಸಮಿತಿ ಪುನರ್‌ ರಚನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!