ಶಿರ್ವ ಮಹಿಳಾ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಕಿರೀಟ

ಶಿರ್ವ ನ.02:  ಸುಮಾರು ಆರು ದಶಕಗಳ ಇತಿಹಾಸವಿರುವ , ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮಹಿಳಾ ಮಂಡಲಗಳಲ್ಲೊಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿರ್ವ ಮಹಿಳಾ ಮಂಡಲ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆಯ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿದರು.

1962ರಲ್ಲಿ ಗ್ರಾಮೀಣ ಪ್ರದೇಶವಾದ ಶಿರ್ವದಲ್ಲಿ ಕೆಲವು ಸಮಾನ ಮನಸ್ಕ ಮಹಿಳೆಯರು ಶಾಂಭವಿ ಹೆಗ್ಡೆಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಮಹಿಳಾ ಮಂಡಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ , ಆರೋಗ್ಯ ಹೀಗೆ ಎಲ್ಲಾ ರಂಗಗಳಲ್ಲೂ ಸೇವೆ ಸಲ್ಲಿಸುವ ಮೂಲಕ ಸುತ್ತ ಮುತ್ತಲಿನ ಪರಿಸರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. 

ಮಹಿಳೆಯರು, ಮಕ್ಕಳು, ವೃದ್ಧರು, ಬಡವರು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳು, ಹೀಗೆ ಎಲ್ಲರ ಏಳಿಗೆಗಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಜನಮಾನಸದಲ್ಲಿ ನೆಲೆ ನಿಂತಿದೆ. ಶೈಕ್ಷಣಿಕ ಮಾಹಿತಿ ಕಾರ್ಯಾಗಾರಗಳು, ಆನ್ ಲೈನ್ ಬೇಸಿಗೆ ಶಿಬಿರಗಳು, ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಅವರನ್ನು ಗೌರವಿಸುವುದು, ಅಂಗನವಾಡಿ ಪುಟಾಣಿಗಳಿಗಾಗಿ ನೃತ್ಯಸ್ಪರ್ಧೆಗಳು, ವಿವಿಧ ಆರೋಗ್ಯ ತಪಾಸಣಾ ಶಿಬಿರಗಳು, ಹಬ್ಬ ಹರಿದಿನಗಳ ಆಚರಣೆ, ಸಾಮಾಜಿಕ ಪಿಡುಗುಗಳ ನಿವಾರಣೆಯ ಕುರಿತಾದ ಮಾಹಿತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸುವುದು, ಮಾದಕ ವ್ಯಸನಿಗಳ ಕುರಿತು ಜಾಗೃತಿ ಕಾರ್ಯಕ್ರಮ ಹೀಗೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನಿರಂತರವಾಗಿ ಹಾಕಿಕೊಂಡು ಬಂದಿರುವ ಶಿರ್ವ ಮಹಿಳಾ ಮಂಡಲವು 2022ರ ಡಿಸೆಂಬರ್ ತಿಂಗಳಲ್ಲಿ ತನ್ನ ವಜ್ರಮಹೋತ್ಸವ ವರ್ಷವನ್ನು ಅತ್ಯಂತ ಅರ್ಥ ಪೂರ್ಣವಾಗಿ, ವಿಜ್ರಂಭಣೆಯಿಂದ ಆಚರಿಸಿತ್ತು. ಅಂದಿನ ಅಧ್ಯಕ್ಷೆ ಗೀತಾ ವಾಗ್ಳೆಯವರ ನೇತೃತ್ವದಲ್ಲಿ  ತಿಂಗಳಿಗೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ತಿಂಗಳ ಸರಣಿ ಕಾರ್ಯಕ್ರಮ ಎನ್ನುವ ಹೆಸರಿನಲ್ಲಿ ಸಮಾಜಕ್ಕೆ ಸಾಕಷ್ಟು ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ನೀಡಿದೆ. 

ಮಹಿಳೆಯರು, ವಿದ್ಯಾರ್ಥಿಗಳು, ದೀನ ದಲಿತರು, ರೋಗಿಗಳು, ವೃದ್ಧರು ಹೀಗೆ ಎಲ್ಲಾ ಸ್ತರದ ಜನರನ್ನು ತಲುಪುವಲ್ಲಿ ಯಶಸ್ಸು ಕಂಡಿರುವ ಈ ಮಹಿಳಾ ಮಂಡಲದ ಅಧ್ಯಕ್ಷರಾಗಿದ್ದ ಬಬಿತಾ ಅರಸ ಅವರ ಸಕ್ಷಮ ಮುಂದಾಳತ್ವದಲ್ಲಿ ಇತರ ಸದಸ್ಯರ ಸಹಕಾರದೊಂದಿಗೆ, ದಾನಿಗಳನ್ನು ಸಂಪರ್ಕಿಸಿ ಮಹಿಳಾ ಮಂಡಲಕ್ಕೊಂದು ಸುಸಜ್ಜಿತವಾದ ಕಟ್ಟಡ ಮಹಿಳಾ ಸೌಧವನ್ನು ನಿರ್ಮಿಸಲಾಗಿದೆ. 2016ರಲ್ಲಿ ಲೋಕಾರ್ಪಣೆ ಗೊಂಡಿರುವುದು ಇದರ ಇತಿಹಾಸದಲ್ಲೊಂದು ಮೈಲಿಗಲ್ಲಾಗಿದೆ. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಕೂಡಾ ತಮ್ಮ ಅನುದಾನವನ್ನು ಈ ಕಟ್ಟಡಕ್ಕೆ ನೀಡಿ ಸಹಕರಿಸಿದ್ದಾರೆ. ಈ ಕಟ್ಟಡದ ಸಭಾಂಗಣವು ಇಂದು ಶಿರ್ವ ಹಾಗೂ ಪರಿಸರದ ಗ್ರಾಮಗಳ ಜನತೆಗೆ ತಮ್ಮ ಕಾರ್ಯಕ್ರಮಗಳನ್ನು ನಡೆಸಲು ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಂಡಿದೆ.ಪ್ರಸಕ್ತ ಅಧ್ಯಕ್ಷರಾಗಿರುವ ಡಾ.ಸ್ಪೂರ್ತಿಶೆಟ್ಟಿಯವರು ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಮಹಿಳಾ ಮಂಡಲವನ್ನು ಮುನ್ನಡೆಸುವ ಪಣತೊಟ್ಟು ಸಂಸ್ಥೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!