ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಬಲತುಂಬಿವೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ಭೂಕುಸಿತ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಿ, ಭೂಕುಸಿತ ತಡೆಗಟ್ಟುವ ಬಗ್ಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಕುರಿತು ಈಗಾಗಲೇ ಬೆಂಗಳೂರಿನ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕಚೇರಿಯ ತಾಂತ್ರಿಕ ಸಿಬ್ಬಂದಿಗಳು ಸರ್ವೇ ನಡೆಸಿದ್ದು, ವರದಿಯೊಂದಿಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇವುಗಳ ತಡೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಮಹಿಳಾ ಮತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕನ್ನಡ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಬಲತುಂಬಿವೆ ಎಂಬುದನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆ ಬಿಡುಗಡೆ ಮಾಡಿರುವ ಆರ್ಥಿಕ ಪ್ರಗತಿ ವರದಿಯಲ್ಲಿ ಹೇಳಲಾಗಿದೆ. ಕರ್ನಾಟಕ ರಾಜ್ಯದ ಜಿಡಿಪಿ ದರ ಶೇ.10.2ರಷ್ಟು ದಾಖಲಾಗಿದ್ದು, ಇದು ದೇಶದ ಒಟ್ಟಾರೆ ಜಿಡಿಪಿ ದರಕ್ಕಿಂತ ಅಧಿಕವಾಗಿದೆ. ಕರ್ನಾಟಕದ ಈ ಆರ್ಥಿಕ ಪ್ರಗತಿಗೆ ನಮ್ಮ ಸರಕಾರದ ಗ್ಯಾರಂಟಿಗಳ ಕೊಡುಗೆ ಗಣನೀಯ ವಾಗಿದೆ ಎಂದು ಅವರು ನುಡಿದರು.
ನಮ್ಮ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಲಿದೆ ಎಂದು ನಿರೀಕ್ಷೆ ಮಾಡಿದವರಿಗೆ ಈಗ ಭ್ರಮನಿರಸನವಾಗಿದೆ. ಇವುಗಳ ನಡುವೆಯೂ ನಾವು ಆರ್ಥಿಕ ಬೆಳವಣಿಗೆ ಸಾಧಿಸಿ ತೋರಿಸಿ ಅವರಿಗೆ ಉತ್ತರ ನೀಡಿದ್ದೇವೆ. ಈ ಐದು ಯೋಜನೆಗಳ ಫಲವಾಗಿ ಪ್ರತಿಯೊಬ್ಬ ಫಲಾನುಭವಿಯ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4000ದಿಂದ 5000 ರೂ. ತನಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ನೆರವು ಲಭಿಸಿದೆ. ಇಂತಹ ದೊಂದು ಯೋಜನೆಯನ್ನು ಪಡೆದ ರಾಜ್ಯದ ಜನರು ಸಂತೃಪ್ತರಾಗಿದ್ದಾರೆ ಎಂದವರು ಯೋಜನೆಗಳ ಟೀಕಾಕಾರರಿಗೆ ಉತ್ತರಿಸಿದರು.
ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ, ಒಂದು ವರ್ಷ ಪೂರ್ಣ ಗೊಂಡಿದ್ದು, ಈವರೆಗೆ ರಾಜ್ಯದಲ್ಲಿ 1 ಕೋಟಿ 23 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಪ್ರತೀ ತಿಂಗಳು 2000 ರೂ. ಗಳಂತೆ ತಿಂಗಳಿಗೆ 2,280 ಕೋಟಿ ರೂ.ಗಳ ಹಣ ವರ್ಗಾವಣೆ ಮಾಡುವ ಮೂಲಕ ಒಂದು ವರ್ಷದಲ್ಲಿ ಒಟ್ಟು 25,248 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಯೋಜನೆಯ ಹಣ ಕುಟುಂಬದ ಯಜಮಾನಿಗೆ ನಾನಾ ರೀತಿಯಲ್ಲಿ ನೆರವಿಗೆ ಬಂದಿದೆ. ಮುಂದೆಯೂ ಈ ಯೋಜನೆಯಿಂ ದ ಜನರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬುದೇ ನಮ್ಮ ಆಶಯವಾಗಿದೆ ಎಂದವರು ನುಡಿದರು.
ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯಡಿ 2,23,084 ಮಹಿಳಾ ಫಲಾನುಭವಿಗಳ ಖಾತೆಗೆ ತಲಾ 2000 ರೂ.ಗಳಂತೆ ಪಾವತಿಸಿ, ಶೇ.96.25 ಪ್ರಗತಿ ಸಾಧಿಸಲಾಗಿದೆ. ಇತರ ಗ್ಯಾರಂಟಿ ಯೋಜನೆಗಳಿಂ ದಲೂ ಜಿಲ್ಲೆಯ ಜನರಿಗೆ ಸಾಕಷ್ಟು ಪ್ರಯೋಜನ ವಾಗುತ್ತಿದೆ ಎಂದವರು ಹೇಳಿದರು.
ಪ್ರವಾಸೋದ್ಯಮ ನೀತಿಗೆ ಅನುಮೋದನೆ: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಅನುಮೋದನೆ ನೀಡಲಾ ಗಿದ್ದು, ಇದರಿಂದ ಕರ್ನಾಟಕ ಪ್ರವಾಸೋದ್ಯ ಮವನ್ನು ವೈವಿಧ್ಯಮಯ ಹಾಗೂ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಹಾಗೂ ಸೇವೆಯ ಮೂಲಕ ಪ್ರವಾಸಿಗರಿಗೆ ವಿಶ್ವ ದರ್ಜೆಯ ಅನುಭವವ ನ್ನು ಒದಗಿಸಿ, ಕರ್ನಾಟಕವನ್ನು ಜಾಗತಿಕವಾಗಿ ಹಾಗೂ ದೇಶದ ಆಕರ್ಷಣೀಯ ಪ್ರವಾಸಿ ತಾಣವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ 1,349 ಕೋಟಿ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ 1 ಕೋಟಿ 88 ಲಕ್ಷ ರೂ.ಗಳ ಮೊತ್ತದಲ್ಲಿ ಕಿಂಡಿ ಆಣೆಕಟ್ಟು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ 33 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು 6 ಕೋಟಿ 15 ಲಕ್ಷ ರೂ. ಮೊತ್ತದಲ್ಲಿ 151 ಕಿ.ಮೀ ಉದ್ದದ ನದಿ ದಂಡೆ ಸಂರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 4,486ಮಿ.ಮೀ. ಮುಂಗಾರು ಮಳೆ ದಾಖಲಾಗಿದ್ದು ವಾಡಿಕೆ ಮಳೆಗಿಂತ ಶೇ.12ರಷ್ಟು ಹೆಚ್ಚುವರಿ ಮಳೆ ಯಾಗಿದೆ. ಈ ಮಳೆ ಯಿಂದಾಗಿ ಮಾನವ ಜೀವಹಾನಿಗಳಲ್ಲದೇ, 1,288 ವಾಸ್ತವ್ಯ ಮನೆಹಾನಿ, 665.10 ಹೆಕ್ಟೇರ್ ಕೃಷಿ ಹಾಗೂ 200.48 ಹೆ.ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ಹಾನಿಗೆ ಸಂಬಂಧಿಸಿದ ಇದುವರೆಗೆ 3 ಕೋಟಿ 9 ಲಕ್ಷ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ಉಸ್ತುವಾರಿ ಸಚಿವೆ ನುಡಿದರು.
ಆಡಳಿತದಲ್ಲಿ ಶೇ.ನೂರು ಕನ್ನಡ: ಆಡಳಿತದಲ್ಲಿ ಕನ್ನಡ ನೂರಕ್ಕೆ ನೂರರಷ್ಟು ಬಳಕೆಯಾಗಬೇಕು ಎಂಬ ಆಶಯದಲ್ಲಿ ನಮ್ಮ ಸರಕಾರ, ಈ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿದೆ. ಕನ್ನಡ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಯುವ ಪೀಳಿಗೆಗೆ ಸಾಹಿತ್ಯ, ಪರಿಸರ, ಜನಪದ ಕಲೆಗಳನ್ನು ಉಳಿಸಲು ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸ ಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕನ್ನಡ ಭಾಷೆಯ ಮೊಟ್ಟ ಮೊದಲ ಶಿಲಾಶಾಸನ ಎಂಬ ಹೆಗ್ಗಳಿಕೆಯ ಕ್ರಿಶ 450ನೇ ಸಾಲಿನ ಪಾಚೀನವಾದ ಹಲ್ಮಿಡಿ ಶಾಸ ನದ ಮಹತ್ವವನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಭುಜಂಗ ಶೆಟ್ಟಿ ಪಾರ್ಕ್‌ನಲ್ಲಿ ಸ್ಥಾಪಿಸಿ ರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಇಂದು ಲೋಕಾಪರ್ಣೆ ಮಾಡಲಾಗಿದ್ದು, ಈ ಸವಿನೆನಪನ್ನು ಶಾಶ್ವತವಾಗಿ ಇಡ ಲಾಗಿದೆ ಎಂದರು.
ಇದಕ್ಕೆ ಮುನ್ನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನದಲ್ಲಿ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಕೊನೆಯಲ್ಲಿ 43 ಮಂದಿ ಜಿಲ್ಲಾ ಸಾಧಕರಿಗೆ ಹಾಗೂ 7 ಸಂಘಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಎಸ್ಪಿ ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು.