ಮಹಾಲಕ್ಷ್ಮಿ ಕೋ.ಅ. ಬ್ಯಾಂಕ್ ಅವ್ಯವಹಾರ: ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವುದಾದರೆ ನನ್ನ ಮಧ್ಯಸ್ಥಿಕೆಯಲ್ಲಿ ಮಾಡೋಣ- ರಘುಪತಿ ಭಟ್

ಉಡುಪಿ: ಮಹಾಲಕ್ಷ್ಮಿ ಕೋ -ಆಪರೇಟಿವ್ ಬ್ಯಾಂಕ್ ಲಿ. ಇದರ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂತೃಸ್ಥರ ಪರವಾಗಿ ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಚಾರದ ಬಗ್ಗೆ ಮಹಾಲಕ್ಷ್ಮಿ ಕೋ – ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇಲ್ಲಿನ ವ್ಯವಸ್ಥಾಪನಾ ನಿರ್ದೇಶಕರು ನನಗೆ ಪತ್ರ ಮುಖೇನ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ತಿಳಿಸಿದ್ದಾರೆ.

ನನಗೆ ಸಂತ್ರಸ್ಥ ಸಾಲಗಾರರು ಬ್ಯಾಂಕ್ ನಿಂದ ಆದ ಅನ್ಯಾಯದ ಕುರಿತು ನೀಡಿದ ವಿವರಗಳನ್ನು ಮತ್ತು ಮಹಾಲಕ್ಷ್ಮಿ ಕೋ. ಆಪರೇಟಿವ್ ಬ್ಯಾಂಕ್ ಲಿ. ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವಿಚಾರಣಾಧಿಕಾರಿಗಳಾದ ಕೆ. ಎಸ್. ಜಗದೀಶ್ (ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು, ಉಡುಪಿ) ಇವರು ನಡೆಸಿದ ವಿಚಾರಣೆಯಲ್ಲಿ ಶಾಖಾ ವ್ಯವಸ್ಥಾಪಕರಾದ ಸುಬ್ಬಣ್ಣ ಅವರು ಒಟ್ಟು 1413 ಮಂದಿಗೆ ತಲಾ ರೂ. 2.00 ಲಕ್ಷದಂತೆ ಒಟ್ಟು ರೂ. 28.26 ಕೋಟಿ ನೀಡಿ ಅವ್ಯವಹಾರ ನಡೆಸಿರುವ ಬಗ್ಗೆ ಬ್ಯಾಂಕ್‌ಗೆ ದಿನಾಂಕ 10-07-2023 ರಂದು ನೋಟೀಸ್ ನೀಡಿರುವ ಪ್ರತಿಯನ್ನು ಲಗತ್ತಿಸಿ ಸವಿವರವಾದ ಪತ್ರವನ್ನು ನೀಡಿದ್ದೇನೆ.

ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಆದ ವ್ಯತ್ಯಾಸವನ್ನು ಸರಿಪಡಿಸಿ ಸಾಲ ಪಡೆಯದ ಗ್ರಾಹಕರನ್ನು ಋಣ ಮುಕ್ತಗೊಳಿಸುವುದು ಪ್ರತಿಷ್ಠಿತ ಬ್ಯಾಂಕ್ ನವರಾದ ತಮ್ಮ ಜವಾಬ್ದಾರಿಯಾಗಿರುತ್ತದೆ.

ತಾವು ಹೇಳಿದಂತೆ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವುದಾದರೆ ನನ್ನ ಮಧ್ಯಸ್ಥಿಕೆಯಲ್ಲಿ ಮಾಡೋಣ. ನೀವು ಬನ್ನಿ. ಸಂತ್ರಸ್ಥರನ್ನು ಕರೆಯುತ್ತೇನೆ. ದಂಡ ಮತ್ತು ಬಡ್ಡಿ ಸಹಿತ ವಸೂಲಾತಿಗೆ ಬಂದಿರುವ ಸತ್ಯಾಸತ್ಯತೆ ಯಾವುದು, ಸುಳ್ಳು ಯಾವುದು ಎಂದು ತಿಳಿಯಲು ನಾನು, ನೀವು, ನನಗೆ ದೂರು ನೀಡಿದ ಸಂತ್ರಸ್ಥ ಗ್ರಾಹಕರ ಜೊತೆ ಪ್ರಮಾಣ ಮಾಡೋಣ. ದಿನಾಂಕವನ್ನು ನಿಗದಿ ಮಾಡಿ. ನನ್ನ ಉದ್ದೇಶ ಸಂತೃಸ್ಥ ಗ್ರಾಹಕರಿಗೆ ನ್ಯಾಯ ಸಿಗಬೇಕು. ಅವರು ಪಡೆಯದ ಸಾಲದಿಂದ ಮುಕ್ತರಾಗಬೇಕು.

Leave a Reply

Your email address will not be published. Required fields are marked *

error: Content is protected !!