ಕಾಪು ಮಾರಿಯಮ್ಮ ದೇವಿ ದೇವಾಲಯದ ಜೀರ್ಣೋದ್ಧಾರಕ್ಕೆ ಭಕ್ತರ ಸಮಾಗಮವಾಗಿದೆ: ಪೇಜಾವರ ಶ್ರೀ
ಕಾಪು, ಅ.30: ನಾವು ಬಳಸುವ ಪ್ರತೀ ಅಕ್ಷರದಲ್ಲೂ ತಾಯಿಯ ಉಸಿರು ಮತ್ತು ಹೆಸರು ಎರಡೂ ಇರುತ್ತವೆ. ಹಾಗಾಗಿ ಅಮ್ಮನ ಮಕ್ಕಳೆಲ್ಲರೂ ಅಮ್ಮನಿಗಾಗಿ ಒಂದಾಗುವಂತಾಗಿದೆ. ಕಾಪು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಜರಗುತ್ತಿರುವ ಸಮಗ್ರ ಜೀರ್ಣೋದ್ಧಾರ ಕಾರ್ಯಗಳಲ್ಲಿ ಪ್ರಪಂಚದಾದ್ಯಂತ ಇರುವ ಭಕ್ತರ ಜೋಡಣೆಯಾಗಿದೆ ಎಂದು ಉಡುಪಿ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ನವ ದುರ್ಗಾಲೇಖನದ 99,999 ಪುಸ್ತಕಗಳಿಗೆ ವಾಗೀಶ್ವರಿ ಪೂಜೆ ನಡೆಸಿ, ಪುಸ್ತಕಗಳನ್ನು ಬಿಡಗಡೆಗೊಳಿಸಿ, ಲೇಖನ ಬರೆದು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ
ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬ್ರಹ್ಮಕಲಶೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲು ಸಿದ್ಧತೆ ಆರಂಭಿಸಲಾಗಿದೆ ಎಂದರು.
ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ|ಮೂ| ಶ್ರೀನಿವಾಸ ತಂತ್ರಿ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಗಣ್ಯರಾದ ಬಾಬು ಹೆಗ್ಡೆ ಪದ್ಮರಾಜ್ ರಾಮಯ್ಯ, ವೀಣಾ ಬನ್ನಂಜೆ, ಉಷಾ ಆನಂದ ಸುವರ್ಣ, ಬಾಲರಾಜ್ ಕೋಡಿಕಲ್, ಮಾಲಿನಿ ಹೆಬ್ಬಾರ್ ಲೇಖನ ಬರೆಯುವ ಮೂಲಕ ಚಾಲನೆ ನೀಡಿ, ಪುಸ್ತಕ ಬಿಡುಗಡೆಗೊಳಿಸಿದರು. ಬಂಟ್ವಾಳ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿದರು.
ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಜೀರ್ಣೋದ್ದಾರ ಕಾರ್ಯ ನಡೆದುಬಂದ ಹಾದಿಯನ್ನು ವಿವರಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ತಹಶೀಲ್ದಾರ್ ಡಾ। ಪ್ರತಿಭಾ ಆರ್., ಗಣ್ಯರಾದ ಉದಯ ಸುಂದರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ರವಿಕಿರಣ್ ಕೆ., ಕಾಪು ದಿವಾಕರ ಶೆಟ್ಟಿ ಕೆ. ಮನೋಹರ ಎಸ್. ಶೆಟ್ಟಿ ಮಾಧವ ಆರ್. ಪಾಲನ್, ಡಾ। ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಧರ ಶೆಟ್ಟಿ ಮಲ್ಲಾರು, ಸುಗ್ಗಿ ಸುಧಾಕರ ಶೆಟ್ಟಿ ಚಂದ್ರಹಾಸ ಡಿ. ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಕೆ. ರಘುಪತಿ ಭಟ್ ಪ್ರಸ್ತಾವನೆಗೈದರು. ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಸ್ವಾಗತಿಸಿದರು. ಯೋಗೀಶ್ ವಿ. ಶೆಟ್ಟಿ ವಂದಿಸಿದರು. ದಾಮೋದರ ಶರ್ಮಾ ನಿರೂಪಿಸಿದರು.