ಉಡುಪಿ: ಜಿಲ್ಲೆಯಲ್ಲಿ 16 ಪ್ರದೇಶ ಸೀಲ್‌ಡೌನ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 150 ಕೊರೋನಾ ಪಾಸಿಟಿವ್ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತಕ್ಕೆ ಸೋಂಕಿತರ ಮನೆ, ಸಮೀಪದ ಗ್ರಾಮಗಳನ್ನು ಸೀಲ್ ಡೌನ್ ಮಾಡುವುದೇ ದೊಡ್ಡ ತಲೆನೋವಿನ ಕೆಲಸವಾಗಿತ್ತು. ಇಂದು ಉಡುಪಿ ಜಿಲ್ಲೆಯಾದ್ಯಂತ ಒಟ್ಟು 16 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 57 ಗ್ರಾಮಗಳಲ್ಲಿ ಕಂಟೇನ್‌ಮೆಂಟ್ ವಲಯವನ್ನು ಘೋಷಿಸಲಾಗಿದೆ. ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಹುನ್ಚಾರ್‌ಬೆಟ್ಟು ಮತ್ತು ಕಸಬ ಗ್ರಾಮದ ಕೋಡಿ ಹರಿ ಭಜನಾ ಮಂದಿರ ಸಮೀಪದ ಪ್ರದೇಶವನ್ನು ಕಂಟೇನ್‌ಮೆಂಟ್ ವಲಯವನ್ನಾಗಿ ಘೋಷಿಸಿಲಾಗಿದೆ. ಗಂಗೊಳ್ಳಿಯ ಜಾಮೀಯ ಮೊಹಲ್ಲಾವನ್ನು ಕಂಟೇನ್ ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಳ್ಳಾಡು, ಬನ್ನೂರು, ಕಂಡೂರು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಎಲ್ಲ ಪ್ರದೇಶದಲ್ಲಿ ಸೋಂಕಿತರವರದಿ ಪಾಸಿಟಿವ್ ಬಂದಿದೆ. ಬೈಂದೂರು ತಾಲೂಕಿನ ನಾಡಾ ಗ್ರಾಮದ ನಾಲ್ಕು ಮತ್ತು ಗೋಳಿಹೊಳೆ ಗ್ರಾಮದ ಮೂರು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿನ ಏಳು ಪ್ರತ್ಯೇಕ ಮನೆಗಳಲ್ಲಿ ಒಬ್ಬೊಬ್ಬರು ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ರೆನ್ ಎಂಬುದಾಗಿ ಘೋಷಿಸಲಾಗಿದೆ. ಜೂ.1ರಂದು ನಾಡಾ ಗ್ರಾಮದ ಒಂದು ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ಇದರೊಂದಿಗೆ ಇಂದಿನ ನಾಲ್ಕು ಸೇರಿದಂತೆ ಒಂದೇ ಗ್ರಾಮದಲ್ಲಿ ಒಟ್ಟು ಐದು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ನಾಡಾ ಗ್ರಾಮದಲ್ಲಿ ಒಟ್ಟು ಎಂಟು ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸಂತೆಕಟ್ಟೆಯಲ್ಲಿ ಒಂದು ವಸತಿ ಸಮುಚ್ಚಯವನ್ನು ಮತ್ತು ಇದೇ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಒಂದು ಮನೆ ಯನ್ನು ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಬಂದಿರುವುದು ವರದಿಯಾಗಿದೆ. ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಕೃಷಿ ಕೇಂದ್ರ ಸಮೀಪದ ಮನೆ ಯೊಂದರ ಪ್ರದೇಶವನ್ನು ಕಂಟೇನ್‌ಮೆಂಟ್ ಮಾಡಲಾಗಿದೆ. ಕ್ವಾರಂಟೇನ್ ಅವಧಿ ಮುಗಿಸಿ ಬಂದಿರುವ ಅವರು, ಈ ಮನೆಯಲ್ಲಿ ಒಬ್ಬರ ವಾಸ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಜೂ.1 ರಂದು ಇದೇ ಗ್ರಾಮದ ಒಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿತ್ತು. |