ಜ.15ರೊಳಗೆ ಇಂದ್ರಾಳಿ ಸೇತುವೆ ನಿರ್ಮಿಸಿ, ಇಲ್ಲವೇ ತೊಲಗಿ- ರಸ್ತೆ ತಡೆ ನಡೆಸಿ ಆಕ್ರೋಶ
ಉಡುಪಿ, ಅ.29: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಮಂಗಳವಾರ ಇಂದ್ರಾಳಿ ಸೇತುವೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಜನ ವಿರೋಧಿಯಾಗಿರುವ ಟೋಲ್‌ನಲ್ಲಿ ವ್ಯವಸ್ಥಿತವಾಗಿ ದರೋಡೆ ಮಾಡಲಾಗುತ್ತಿದೆ. ಇಲ್ಲಿನ ಎಲ್ಲ ರಸ್ತೆಗಳು ಹೊಂಡಮಯವಾಗಿದೆ. ಆದರೂ ಉಡುಪಿಯ ಜನತೆ ಮಾತನಾಡಲ್ಲ. ನಮ್ಮ ಹಕ್ಕುಗಳನ್ನು ಕೇಳುವಾಗ ಆ ಪಕ್ಷ ಈ ಪಕ್ಷ ಎಂಬುದು ಇರುವುದಿಲ್ಲ. ಆದರೆ ನಮ್ಮ ರಾಜಕಾರಣಿಗಳು ಜನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಆಯ್ಕೆಯಾಗಿ ಬರುವ ಸಂಸದರು ಯಾವುದೇ ಕೆಲಸ ಮಾಡದೆ ಬಾಯಿ ಮುಚ್ಚಿ ಕುಳಿತಿರುತ್ತಾರೆ. ಯಾಕೆಂದರೆ ಇಲ್ಲಿಯ ಜನ ಮಾತನಾಡಲ್ಲ ಮತ್ತು ಚುನಾವಣೆಯಲ್ಲಿ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ರಾಜ್ಯ ಅಥವಾ ಕೇಂದ್ರ ಸರಕಾರ ತಪ್ಪು ಮಾಡಿದಾಗ ಬೀದಿಗೆ ಇಳಿದು ಹೋರಾಟ ಮಾಡಿದರೆ ಮಾತ್ರ ನಮಗೆ ಬೆಲೆ ದೊರೆಯುವುದು. ಚುನಾಯಿತ ಜನಪ್ರತಿನಿಧಿ ಗಳಿಗೆ ಮಾನ ಮಾರ್ಯದೆ ಎಂಬುದು ಇದ್ದರೆ ಮುಂದಿನ ಜ.15ರೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಅವರು ತಮ್ಮ ಸ್ಥಾನ ಬಿಟ್ಟು ತೊಲಗಲಿ ಎಂದು ಅವರು ಕಿಡಿಕಾರಿದರು.
ವಿಶ್ಲೇಷಕ ಪ್ರೊ.ಸುರೇಂದ್ರನಾಥ್ ಶೆಟ್ಟಿ ಕೊಕ್ಕರ್ಣೆ ಮಾತನಾಡಿ, ಈ ಸೇತುವೆಯನ್ನು ಜ.15ರೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಲ್ಲಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಗೆ ಬರೆಸಲಾಗಿದೆ. ಇದು ಕೆಟ್ಟ ಸಂಪ್ರದಾಯ. ಇದರ ಅರ್ಥ ಗುತ್ತಿಗೆದಾರರಲ್ಲಿ ಕೆಲಸ ಮಾಡುವಲ್ಲಿ ಆ ಸರಕಾರ ಸಂಪೂರ್ಣ ಸೋತಿದೆ ಎಂಬುದು ಎಂದು ಟೀಕಿಸಿದರು.
ಹೋರಾಟ ಸಮಿತಿ ಪ್ರಮುಖ ಅಮೃತ್ ಶೆಣೈ ಮಾತನಾಡಿ, ಸೇತುವೆ ಕಾಮಗಾರಿಯನ್ನು ಬಹುತೇಕ ಸ್ಥಗಿತಗೊಂಡು ಹಲವು ವರ್ಷಗಳು ಸಂದಿವೆ. ಇದರಿಂದ ಇಲ್ಲಿ ಅಪಘಾತಗಳಾಗಿ ಅಪಾರ ಸಾವು ನೋವು ಸಂಭವಿಸುತ್ತಿದೆ. ಅಲ್ಲದೆ ದಿನ ಗಟ್ಟಲೆ ಟ್ರಾಫಿಕ್ ಜಾಮ್‌ಗೂ ಕಾರಣವಾಗುತ್ತಿದೆ. ಇಲ್ಲಿರುವ ಶಾಲಾ ಕಾಲೇಜು, ವಿದ್ಯಾರ್ಥಿಗಳ ಜೀವಕ್ಕೂ ಅಪಾಯಕರ ಪರಿಸ್ಥಿತಿ ಉಂಟಾಗಿದೆ. ಈ ಕಾಮಗಾರಿ ವಿಳಂಬದಿಂದ ಉಡುಪಿಯ ಆರ್ಥಿಕತೆಗೆ ಪರೋಕ್ಷವಾಗಿ ಹೊಡೆತವಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್, ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಪ್ರಸಾದ್‌ರಾಜ್ ಕಾಂಚನ್, ಹರಿಪ್ರಸಾದ್ ರೈ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಶಲ್ ಶೆಟ್ಟಿ, ವಿವಿಧ ಸಂಘಟನೆಗಳ ಪ್ರಮುಖರಾದ ಇದ್ರೀಸ್ ಹೂಡೆ, ಕೆ.ರವೀಂದ್ರ ಕಾಮತ್, ರೇಷ್ಮಾ, ಇಫ್ತಿಕಾರ್ ಅಹ್ಮದ್, ಹುಸೇನ್ ಹೈಕಾಡಿ, ರಮೇಶ್ ತಿಂಗಳಾಯ, ಸುಜಯ ಪೂಜಾರಿ ಮೊದಲಾದವರು ಮಾತನಾಡಿದರು.
ಸಮಿತಿಯ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಅಬ್ದುಲ್ ಅಝೀಝ್ ಉದ್ಯಾವರ, ಬಿ.ಕುಶಲ ಶೆಟ್ಟಿ, ಅನ್ಸಾರ್ ಅಹ್ಮದ್, ಲತಾ ಆನಂದ ಶೇರಿಗಾರ್, ಚಂದ್ರಮೋಹನ್, ಸುರೇಶ್ ಶೆಟ್ಟಿ ಬನ್ನಂಜೆ, ಮಹಾಬಲ ಕುಂದರ್, ಬಿ.ಶ್ರೀಧರ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಪೀರು ಮುಹಮ್ಮದ್, ಇಸ್ಮಾಯಿಲ್ ಆತ್ರಾಡಿ, ಅಬ್ದುಲ್ ಅಝೀಝ್, ಯಾಸೀನ್ ಮಲ್ಪೆ, ಅಲ್ಫಾನ್ಸ್ ಡಿ ಕೋಸ್ತ, ಶೇಕ್ ವಾಹಿದ್, ಶಾಂತಿ ಪೀರೆರಾ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಅನಿತಾ ಡಿಸೋಜ, ಡಾ. ಸುನೀತಾ ಶೆಟ್ಟಿ, ಸತೀಶ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.