ಪೇಜಾವರ ಶ್ರೀಗಳ ಅವಹೇಳನಕಾರಿ ಹೇಳಿಕೆ: ಬಿ.ಕೆ ಹರಿಪ್ರಸಾದ್ ವಿರುದ್ಧ ಬ್ರಾಹ್ಮಣ ಮಹಾಸಭಾ ಖಂಡನೆ
ಉಡುಪಿ: ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಸಮಸ್ತ ವಿಪ್ರ ಭಾಂದವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮಾತನಾಡಿ, ಪೇಜಾವರ ಶ್ರೀಗಳ ಬಗ್ಗೆ ಮಾತನಾಡಲು ಹರಿಪ್ರಸಾದ್‌ಗೆ ಎಳ್ಳಷ್ಟು ಯೋಗ್ಯತೆ ಇಲ್ಲ. ಪೇಜಾವರ ಶ್ರೀಗಳು ವಿದ್ವತ್ತು, ಧರ್ಮ ನಿಷ್ಠೆ, ಸಮಾಜದ ಬಗ್ಗೆ ಇರುವ ಕಳಕಳಿ ಹೊಂದಿದ ಸ್ವಾಮೀಜಿ. ಅವರು ಯಾವತ್ತೂ ಒಂದು ಜಾತಿಯ ಬಗ್ಗೆ ಮಾತನಾಡಿದವರಲ್ಲ. ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಸ್ವಾಮೀಜಿ. ನೂರಾರು ಬಡ ಕುಟುಂಬಗಳಿಗೆ ಭಕ್ತರ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೆಲ್ಲವೂ ಜಾತಿ ಲಾಬಿ ನಡೆಸುವ ವ್ಯಕ್ತಿಗಳಿಗೆ ಕಾಣುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇಡೀ ಸನಾತನ ಹಿಂದೂ ಧರ್ಮದ ಒಬ್ಬ ಮಹಾನ್ ಶಕ್ತಿಯುತ ಸ್ವಾಮೀಜಿಯ ಬಗ್ಗೆ ಹರಿಪ್ರಸಾದ್ ಆಡಿರುವ ಅವಹೇಳನ ಮಾತು ಅಕ್ಷಮ್ಯವಾದದು. ಹೀಗಾಗಿ ಅವರು ಕರ್ನಾಟಕ ರಾಜ್ಯದ ಸಮಸ್ತ ಜನತೆಯ ಮುಂದೆ ಪೇಜಾವರ ಶ್ರೀಗಳ ಬೇಷರತ್ ಕ್ಷಮೆಯಾಚಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ವಿಪ್ರ ಬಾಂಧವರು ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕ ಶ್ರೀಕಾಂತ್ ಉಪಾಧ್ಯಾಯ, ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯಾಯ, ಉಡುಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಉಪಾಧ್ಯಾಯ, ರಾಮದಾಸ್ ಉಡುಪ ಇದ್ದರು.