ಉಡುಪಿ : ರಾಜಾಂಗಣದಲ್ಲಿ ಜಾನಪದ ಹಬ್ಬ
ಉಡುಪಿ ಅ.28(ಉಡುಪಿ ಟೈಮ್ಸ್ ವರದಿ): ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಉಡುಪಿ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಜಾಂಗಣದಲ್ಲಿ ಜಾನಪದ ಹಬ್ಬವನ್ನು ಆಯೋಜಿಸಲಾಯಿತು.
ಜಾನಪದ ಹಬ್ಬವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. ಬಳಿಕ ಆಶೀವರ್ಚನ ನೀಡಿ, ಜಾನಪದ ಕಲೆಗಳಲ್ಲಿ ಸಹಜತೆಯನ್ನು ಕಾಣಬಹುದು. ಮನುಷ್ಯನ ಸಹಜ ಪ್ರವೃತಿಗಳು, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಒಳ್ಳೆಯ ಸಂದೇಶ ನೀಡುವ ಅತ್ಯಂತ ಶ್ರೇಷ್ಠವಾದ ಕಲೆ ಇದಾಗಿದೆ. ಆದರೆ ನಾವು ಇಂದು ಆಧುನಿಕ ಕಲೆಯ ಮೂಲಕ ಅಸಹಜತೆ ಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಜಾನಪದ ಕೇವಲ ಕಲೆ ಮಾತ್ರವಲ್ಲ ಪ್ರಾಚೀನ ಸಂಸ್ಕೃತಿಯ ಬಗ್ಗೆ ಜ್ಞಾನ ನೀಡುವ ಕಲೆ ಜ್ಞಾನ ಪ್ರಧವಾದ ಕಲೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, ಹಿರಿಯರು ಕಟ್ಟಿಕೊಟ್ಟ ಮಾನವೀಯತೆ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಮುಂದುವರೆದರೆ ನಮ್ಮ ಬದುಕು ಸಾರ್ಥಕ ಆಗುವುದು ಮಾತ್ರವಲ್ಲ, ಸಮಾಜ ಹಾಗೂ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಯುತ್ತದೆ ಎಂದು ಹೇಳಿದರು.
ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ವ್ಯಕ್ತಿಗಳು ಕಾರಣರಲ್ಲ. ಇದಕ್ಕೆಲ್ಲ ಸಮಾಜವೇ ಕಾರಣ. ಹಿಂದೆ ಒಳ್ಳೆಯದು ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಹಾಗೂ ತಪ್ಪು ಮಾಡಿದವರನ್ನು ಬಹಿಷ್ಕರಿಸುವ ಸಮಾಜ ಇತ್ತು. ಆದರೆ ಈಗ ಸಮಾಜದ ಭಾವನೆಯಲ್ಲಿ ಬದಲಾವಣೆ ಯಾಗಿದೆ. ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವು ಇದ್ದೇವೆ. ಇಂತಹ ಸಮಾಜದಲ್ಲಿ ಇಂದು ಶ್ರೀಮಂತರಾಗುವುದಕ್ಕೆ ಪೈಪೋಟಿ ಆರಂಭವಾಗಿದೆ. ಶ್ರೀಮಂತರಾಗುವುದು ತಪ್ಪಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಸಂಪತ್ತು ಗಳಿಸಬೇಕೆ ಹೊರತು ಇನ್ನೊಬ್ಬರ ಜೇಬಿಗೆ ಕೈ ಹಾಕಿ ಅಥವಾ ಹೊಟ್ಟೆಗೆ ಕಲ್ಲು ಹಾಕಿ ಆಗುವುದಲ್ಲ. ಅಂತಹ ಸಂಪತ್ತಿನಿಂದ ಸಂತೋಷ ಬರುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ವರ್ಣ ಜ್ಯುವೆಲ್ಲರ್‌ನ ಮುಖ್ಯ ಹಣಕಾಸು ಅಧಿಕಾರಿ ವರುಣ್ ರಾಮದಾಸ್ ನಾಯಕ್ ಗುಜ್ಜಾಡಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೆಕಾರು, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ನಿರ್ದೇಶಕಿ ಗಿರಿಜಾ ಶಿವರಾಮ ಶೆಟ್ಟಿ, ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್, ಸುನೀಲ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಭಂಡಾರಿ, ಅಮಿತಾಂಜಲಿ ಕಿರಣ್ ಉಪಸ್ಥಿತರಿದ್ದರು.