ಉಡುಪಿ: ಜಾನಪದ ಹಬ್ಬ ಸಮಾರೋಪ – ಪ್ರಶಸ್ತಿ ಪ್ರದಾನ

ಜಾನಪದ ಹಳ್ಳಿ ಬದುಕಿನ ಪ್ರತಿಬಿಂಬ: ಡಾ.ಬಲ್ಲಾಳ್

ಉಡುಪಿ : ನಮ್ಮ ನಾಡಿನ ಜಾನಪದ ಕಲೆಗಳು ಹಳ್ಳಿಯ ಬದುಕನ್ನು ಬಿಂಬಿಸುವ ಪ್ರೆತಿಬಿಂಬಗಳಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ಜಾನಪದ ಹಬ್ಬ-2024’ ಇದರ ಸಮಾರೋಪದಲ್ಲಿ ಮಾತನಾಡಿದರು.

ಕೃಷಿಕರು ತಮ್ಮ ಕೃಷಿ ಬದುಕಿನ ಆಯಾಸದ ಮಧ್ಯೆ ಮನೋರಂಜನೆಗಾಗಿ ಹಾಡು, ನೃತ್ಯಗಳನ್ನು ಕಟ್ಟಿಕೊಂಡರು. ಇದು ನಮ್ಮ ಗ್ರಾಮೀಣ ಭಾರತದ ಸಂಪತ್ತಾಗಿದೆ. ಜಾನಪದ ಕಲೆ, ಸಂಗೀತಕ್ಕೆ ಅದರದ್ದೇ ಆದ ಶಕ್ತಿಯಿದೆ. ಅದನ್ನು ಕಂಡಾಗ ರೋಮಾಂಚನವಾ ಗುತ್ತದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟರ ಸಂಕಲ್ಪ ಸಿದ್ಧಿಗೆ ಅಭಿನಂದನೇ ಸಲ್ಲಿಸಲೇಬೇಕು ಎಂದು ಅಭಿಪ್ರಾಯ ಪಟ್ಟರು.

ಸನ್ಮಾನ ನೆರವೇರಿಸಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮ ಗಳು ನಿತ್ಯ ನಿರಂತರವಾಗಿರಲಿ ಎಂದು ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದೈವಾರಾಧನೆ, ನಾಗಾರಾಧನೆ ಸೇರಿದಂತೆ ಹಲವಾರು ಜಾನಪದ ಪ್ರಕಾರಗಳಿದ್ದು, ನಿರಂತರ ಚಟುವಟಿಕೆಯಲ್ಲಿವೆ. ಜಾನಪದ ಕಲಾವಿದರು ಆರ್ಥಿಕವಾಗಿ ತುಂಬಾ ಹಿಂದುಳಿದಿರುವುದರಿoದ ಅವರಿಗೆ ಸಂಘಸoಸ್ಥೆಗಳ ಪ್ರೋತ್ಸಾಹದ ಅಗತ್ಯವಿದೆ. ಅಬಾಲವೃದ್ಧರಾಗಿ ಜಾನಪದ ಕಲೆಗಳನ್ನು ಇಷ್ಟ ಪಡುವ ಪ್ರೇಕ್ಷಕರುಗಳಿರುವುದರಿಂದ ಕಲಾವಿದರಿಗೆ ವೇದಿಕೆ ಕೊಟ್ಟರೆ ಅವರ ಬದುಕಿಗೆ ಆಸರೆಯಾಗುತ್ತಿದೆ. ಇದಕ್ಕೆ ಡಾ.ತಲ್ಲೂರು ಅವರು ಬೆಳೆಸಿದ ಕಲಾಮಯಂ ತಂಡವೇ ಸಾಕ್ಷಿ ಎಂದರು.

ಮಾಹೆಯ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಅವರು ಮಾತನಾಡಿ, ನಮ್ಮ ನಾಡಿನ ಜಾನಪದ ಶ್ರೀಮಂತಿಗೆ ಇತರರು ಹೊಟ್ಟೆ ಕಿಚ್ಚು ಪಡುವಷ್ಟಿದೆ. ಈ ಅನನ್ಯತೆಯನ್ನು ಕಾಪಾಡಿಕೊಳ್ಳ ಬೇಕು. ಅನಿವಾರ್ಯ ಬದಲಾವಣೆಯನ್ನು ಸ್ವೀಕರಿಸಿ, ವೈಶಿಷ್ಟ್ಯವನ್ನು ಕಾಪಾಡಿಕೊಳ್ಳಲು ಸಮಾಜ ಮುಂದಾಗಿರುವುದು ಸ್ವಾಗತಾರ್ಹ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸಬೇಕು. ಇಲ್ಲಿನ ಆಹಾರ ಪದ್ಧತಿ ಬಗ್ಗೆ, ನೀರಿನ ಹಂಚಿಕೆ ಬಗ್ಗೆಯೂ ಶಿಲಾಶಾಸನ ಗಳು ಸಿಕ್ಕಿವೆ. ಈ ನಿಟ್ಟಿನಲ್ಲಿ ಜಾನಪದ ಪರಿಷತ್ತು ಹಾಗೂ ಡಾ.ತಲ್ಲೂರು ಅವರು ಒಗ್ಗೂಡಿ ಈ ಕಾರ್ಯ ನಡೆಸಿರುವುದು ಇತರರಿಗೆ ಮಾದರಿ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಜಾನಪದ ಪರಿಷತ್ತಿನ ಮೂಲಕ ನಾಡಿನ ಜಾನಪದ ಕಲೆಗಳನ್ನು ಉಳಿಸುವ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಕಲಾಮಯಂ ಜಾನಪದ ತಂಡವೇ ಸಾಕ್ಷಿ. ಅಲ್ಲದೆ ರಾಜಾಂಗಣದಲ್ಲಿ ಕಳೆದ 18 ವರ್ಷಗಳಿಂದ ಚಿಟ್ಟಾಣಿ ಸಪ್ತಾಹ, 19 ವರ್ಷಗಳಿಂದ ಧಾರೇಶ್ವರ ಅಷ್ಟಾಹ ಹಾಗೂ 6 ವರ್ಷಗಳಿಂದ ಹಟ್ಟಿಯಂಗಡಿ ಮೇಳದ ಪಂಚಮಿ ಯಕ್ಷಗಾನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಟ್ರಸ್ಟ್ ಹಾಗೂ ಪರಿಷತ್ತಿನ ಸಹಕಾರದಲ್ಲಿ ಮಾಡುತ್ತಿದ್ದೇನೆ. ಈ ಕೈಂಕರ್ಯದಿoದ ಕಲೆ, ಕಲಾವಿದರಿಗೆ ಒಳಿತಾದರೆ ಅದೇ ತನಗೆ ಸಾರ್ಥಕತೆ ಎಂದರು.

ಕಾರ್ಯಕ್ರಮದಲ್ಲಿ ಐಯ್ಯಂಗಾರ್ ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಅವರನ್ನು ಪತಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ ಸಮೇತ ಸನ್ಮಾನಿಸಿ, ‘ಜಾನಪದ ಸಾಂಸ್ಕೃತಿಕ ಯೋಗ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಹಬ್ಬದಲ್ಲಿ ಪ್ರದರ್ಶನ ನೀಡಿದ ವಿವಿಧ ಜಾನಪದ ತಂಡದ ಸದಸ್ಯರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ನಿರ್ದೇಶಕಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ಖಜಾಂಚಿ ಪ್ರಶಾಂತ ಭಂಡಾರಿ, ಎಂ.ಕೃಷ್ಣ ಆಳ್ವ, ಗೌರವಾಧ್ಯಕ್ಷ ಶ್ರೀಧರ ಶೇಣವ, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು. ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ನ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ನಿರೂಪಿಸಿದರು. ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.  ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಅನುಷಾ ಆಚಾರ್ಯ ವಂದಿಸಿದರು.

ಜಾನಪದ ಹಬ್ಬದಲ್ಲಿ ವಿವಿಧ ಕಲಾತಂಡಗಳಿoದ ಕುಣಿತ ಭಜನೆ. ಹೋಳಿ ಕುಣಿತ, ಗೋಂದೋಳು, ಜಾನಪದ ವಾದ್ಯಗೋಷ್ಠಿ, ಕಲಾಮಯಂ ತಂಡದಿoದ ಜಾನಪದ ವೈಭವ ಮೊದಲಾದ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

Leave a Reply

Your email address will not be published. Required fields are marked *

error: Content is protected !!