ದೇಶದ ಸೌಹಾರ್ದತೆ ಉಳಿಯಬೇಕಾದರೆ ಗ್ರಾಮದ ಸೌಹಾರ್ದತೆ ಉಳಿಯಬೇಕು- ಡಾ. ಎಂ.ಮೋಹನ್ ಆಳ್ವ
ಉದ್ಯಾವರ: ನಮ್ಮ ದೇಶ ಸೌಹಾರ್ದತೆಯಿಂದ ಬಾಳಿ ಬದುಕಬೇಕಾದರೇ ನಮ್ಮ ನಮ್ಮ ಪುಟ್ಟ ಊರಿನ ಸೌಹಾರ್ದತೆ ಉಳಿಯಬೇಕು. ನಮ್ಮೂರ ಎಲ್ಲಾ ಧರ್ಮದ ಜನರು ಒಂದಾಗಿ ಬದುಕಿದಾಗ ಮಾತ್ರ ದೇಶದ ಜನತೆಯಲ್ಲಿ ಏಕತೆ ಮೂಡಬಹುದು. ಅದಕ್ಕೆ ಇಂತಹ ಸಮಾನ ಮನಸ್ಕ ಮನಸ್ಸುಗಳು ಒಂದಾಗಬೇಕು. ಅಂತಹ ಕೆಲಸವನ್ನು ಈ ಸಂಸ್ಥೆ ಮಾಡಿಕೊಂಡು ಬಂದಿರುತ್ತದೆ.
ಉದ್ಯಾವರಕ್ಕೆ ಏನು ಬೇಕಾಗಿದೆ ಎಂದು ತಿಳಿದು ಅದನ್ನು 50 ವರ್ಷಗಳಿಂದ ತಮ್ಮ ಮಿತಿಯಲ್ಲಿ ಸಂಸ್ಥೆ ತಪಸ್ಸಿನಂತೆ ಮಾಡಿಕೊಂಡು ಬಂದಿರುತ್ತದೆ. ನಮ್ಮ ದೇಶವನ್ನು ಒಂದು ಭಾಷೆ ಒಂದು ಧರ್ಮ ಒಂದು ಸಂಸ್ಕೃತಿಗೆ ಸೀಮಿತವಾಗಿಡಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ನಮ್ಮದು. ಇದಕ್ಕೆ ನಮ್ಮ ಸಂವಿಧಾನ ಕಾರಣ. ಅದಕ್ಕೆ ಇಂಥ ಸಂಸ್ಥೆಗಳು ಕೈಜೋಡಿಸುತ್ತಿರುತ್ತದೆಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಅವರು ಉದ್ಯಾವರ ಶ್ರೀ ಶಂಭುಶೈಲೇಶ್ವರ ದೇವಸ್ಥಾನದ ಮಾರ್ಕಾಂಡೆಯ ರಂಗಮಂಟಪದಲ್ಲಿ ಜರಗಿದ ಉದ್ಯಾವರ ಫ್ರೆಂಡ್ಸ್ ಇದರ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಅವರು ಮುಂದುವರಿಯುತ್ತಾ ಧರ್ಮ ಮತ್ತು ಸಮಾಜ ಎಂಬ ಎರಡು ಶಬ್ದಗಳನ್ನು ನಾವು ಸಾಕಷ್ಟು ಬಳಸುತ್ತಿದ್ದೇವೆ .ಆದರೆ ಅದನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದೇವೆ. ಧರ್ಮ ಬೇರೆ ಮತ ಬೇರೆ ಅವೆರಡೂ ಸೇರಿದಾಗ ಅದು ಮಾನವ ಧರ್ಮ. ನಾವು ನಮ್ಮ ಅದೃಷ್ಟದಿಂದ ಮಾನವ ಧರ್ಮದಲ್ಲಿ ಹುಟ್ಟಿದ್ದೇವೆ. ಸಮಾನ ಮಸ್ಕರು ಒಂದಾದರೆ ಮಾತ್ರ ಕಾಲ ಕಾಲದ ಸಮಸ್ಯೆಗಳನ್ನು ನಾವು ಎದುರಿಸ ಬಹುದು. ಸಮಸ್ಯೆಗಳು ಎದುರಾದಾಗ ನಮ್ಮಿಂದ ಏನಾಗುತ್ತದೆ ಎಂದು ಕೂರದೆ ನಮ್ಮಿಂದ ಆಗುವಂತ ಪ್ರತಿಕ್ರಿಯೆಯನ್ನು ನೀಡೋಣ. ಆಗ ಚರಿತ್ರೆ ನಮ್ಮನ್ನು ದಾಖಲಿಸುತ್ತದೆ. ಇದು ಈ ಸಂಸ್ಥೆಯಿಂದ ಆಗಿದೆ ಎಂದರು.
ಸೌಹಾರ್ದತೆಯ ನಾಡಲ್ಲಿ ಬೇರೆ ಮೌಲ್ಯ ಬಿತ್ತುವ ಪ್ರಯತ್ನ ಈಗಾಗುತ್ತಿದೆ. ಎಂತಹ ದುರಿತ ಕಾಲದಲ್ಲಿ ಸೌಹಾರ್ದತೆಯನ್ನು ಬಯಸುವ ಇಂತಹ ಸಂಸ್ಥೆ 50 ವರ್ಷ ಬಾಳಿ ಬದುಕಿದೆ. ಎಲ್ಲರನ್ನೂ ತನ್ನ ತೆಕ್ಕೆಗೆ ಎಳೆದುಕೊಂಡು ಮುಂದೆ ಸಾಗುತ್ತಿರುವುದನ್ನು ನೋಡುವಾಗ ನಾಳಿನ ಬಗ್ಗೆ ಭರವಸೆ ಮೂಡುತ್ತದೆ. ಗಾಂಧಿಯ ಸಂಪರ್ಕಕ್ಕೆ ಬಂದವರು ಗಾಂಧಿ ಸಂದೇಶವನ್ನು ಗಂಭೀರವಾಗಿ ತೆಗೆದುಕೊಂಡು ಬದುಕಿದರು. ಅದೇ ರೀತಿ ಸಂಸ್ಥೆಯ ಬಳಿ ಬರುವವರು ಸಂಸ್ಥೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿಸುತ್ತಿರುವೂದುರಿಂದ ಸಂಸ್ಥೆ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.
ಉದಯಕುಮಾರ್ ಇರ್ವತ್ತೂರು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ ಸೌಹಾರ್ದತೆಯ ಬದುಕು ಗಾಂಧಿ ಕಂಡ ಕನಸು. ಅದು ಉದ್ಯಾವರದಲ್ಲಿ ಸಾಧ್ಯವಾಗಿದೆ ಅದಕ್ಕೆ ಮುಖ್ಯ ಕಾರಣ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನವರು ಹಾಕಿಕೊಳ್ಳುತ್ತಿರುವ ಕಾರ್ಯಕ್ರಮಗಳು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಒಂದು ಸಂಸ್ಥೆ 50 ವರ್ಷ ಬಾಳಿದೆ ಎಂದರೆ ಇದು ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆ ಹಿರಿಯರನ್ನು ಸನ್ಮಾನ ಮಾಡುವ ಕ್ರಿಯೆ ಇದೆಯಲ್ಲ ಅದು ಹಿಂತಿರುಗಿ ನೋಡುವ ಕ್ರಿಯೆ. ಇದೇ ಸಂಸ್ಥೆಯ ಬಾಳ್ವಿಕೆಗೆ ಕಾರಣ ಎಂದರು.
ನಮ್ಮ ಘನ ಸಂವಿಧಾನದ ಬಗ್ಗೆ ಇಂದು ನಾವು ಮಕ್ಕಳಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ . ಮುಂದೆ ದೇಶವನ್ನು ಸಂವಿಧಾನ ಮಾತ್ರ ಉಳಿಸ ಬಹುದು. ಈ ಸಂಸ್ಥೆ 50 ವರ್ಷಗಳಿಂದ ಈ ಸಂಸ್ಥೆ ಬಾಳಿ ಬದುಕಿದೆ ಎಂದರೆ ಆಶ್ಚರ್ಯವಾಗುತ್ತದೆ.. ಇದು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ನನಗೆ ಈ ಸಮಾರಂಭದಲ್ಲಿ ಸಿಕ್ಕಿದೆ, ಸಮಾರಂಭದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆಯನ್ನು ಗಾಯನ ಮಾಡಿಸಿದ್ದು ಒಂದು ಅತ್ಯದ್ಭುತವಾದ ಕೆಲಸ. ಇಂತಹ ಆಲೋಚನೆಗಳೇ ಸಂಸ್ಥೆಯ ಯಶಸ್ಸಿಗೆ ಕಾರಣ.ಜನತೆಗೆ ಸಂವಿಧಾನವನ್ನು ಪರಿಚಯಿಸಲು ಇದು ತುಂಬಾ ಅಗತ್ಯ ಕೆಲಸ. ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ತುಳುಕುಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ನುಡಿದರು
ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕ ಪದಾಧಿಕಾರಿಗಳಾದ ಅನ್ವರ್ ಹುಸೇನ್, ಯು.ಅರುಣ್ ಕುಮಾರ್, ಮಾಧವ ಜಿ.ಕೋಟ್ಯಾನ್, ರಫೀಕ್ ಯುಸೂಪ್ ಮತ್ತು ವಿವಿಧ ಕ್ಷೇತ್ರಗಳ ಸಾಧಕರಾದ ಮಾ.ಅನ್ವಿತ್ ಆರ್. ಶೆಟ್ಟಿಗಾರ್, ಶೋಭಾ ದಿನೇಶ್ ಉದ್ಯಾವರ್ , ಯು.ಯಜ್ಞೇಶ್ವರ ಆಚಾರ್ಯ, ಗಿರೀಶ್ ಕುಮಾರ್ ಸೋಮಪ್ಪ ಜತ್ತನ್ ಮತ್ತು ಮಹಾಪೋಷಕರಾದ ಅಬ್ದುಲ್ ಜಲೀಲ್ ಸಾಹೇಬರನ್ನು ಸಂಮಾನಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಅಬ್ದುಲ್ ಜಲೀಲ್ ಸಾಹೇಬ್, ಶರತ್ ಕುಮಾರ್, ರಮೇಶ್ ಕುಮಾರ್ ಉದ್ಯಾವರ್, ಯು ಚಂದ್ರಾವತಿ ಎಸ್. ಭಂಡಾರಿ. ಯು. ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.
ಉದ್ಯಾವರ ಸೈಂಟ್ಸ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಗಾಯನ ಜರಗಿತು. ಅಧ್ಯಕ್ಷರಾದ ತಿಲಕ್ ರಾಜ್ ಸಾಲ್ಯಾನ್ ಅವರು ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ಆಲಿ 50 ವರ್ಷದ ಸಂಸ್ಥೆ ನಡೆದು ಬಂದ ದಾರಿಯನ್ನು ಸಭೆಯ ಮುಂದಿರಿಸಿದರು. ಕಾರ್ಯದರ್ಶಿ ಶ್ರೀಮತಿ ಆಶಾ ವಾಸು ಸಂಸ್ಥೆಯ 50ನೇ ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಸುಗಂಧಿ ಶೇಖರ್ ಅವರು ವಂದಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೈಂದೂರು ಸುರಭಿ ತಂಡದ ಮಕ್ಕಳಿಂದ ಮಕ್ಕಳ ರಾಮಾಯಣ ನಾಟಕ ಜರಗಿತು.