ಉಡುಪಿ: ಚಕ್ರತೀರ್ಥ ಸೇತುವೆ ಉದ್ಘಾಟನೆ
ಉಡುಪಿ: ನಗರಸಭೆಯ ಮೂಡು ಸಗ್ರಿ ವಾರ್ಡಿನ ಚಕ್ರತೀರ್ಥ ಬಳಿ ಸುಮಾರು 13.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸೇತುವೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಇಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಳೆಗಾಲದ ಅವಧಿಯಲ್ಲಿ ಹಳೆ ಸೇತುವೆ ಕುಸಿತಗೊಂಡ ಹಿನ್ನಲೆಯಲ್ಲಿ ನಗರಸಭೆಯ ಅನುದಾನದ ಮೂಲಕ ಅನುದಾನ ಮಂಜೂರು ಮಾಡಿ ನೂತನ ಸೇತುವೆಯನ್ನು ಇಂದು ಲೋಕಾರ್ಪಣೆ ಯಾಗಿದ್ದು, ಸಗ್ರಿ ವಾರ್ಡಿನ ಇನ್ನೊಂದು ಸೇತುವೆಯ ಕಾಮಗಾರಿಯು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.
ಈಗಾಗಲೇ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಚರಂಡಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 5 ಕೋಟಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಈಗಾಗಲೇ ಲೋಕೋಪಯೋಗಿ ಇಲಾಖೆಯ ರಸ್ತೆಗಳ ತುರ್ತು ನಿರ್ವಹಣೆ ತುರ್ತಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಭಾರತಿ ಪ್ರಶಾಂತ್, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಗಣ್ಯರಾದ ಶ್ರೀ ವೇದವ್ಯಾಸ ಐತಾಳ್, ರವಿ ಐತಾಳ್, ಸ್ಥಳೀಯ ಮುಖಂಡರಾದ ಸಂತೋಷ್ ಆಚಾರ್ಯ, ಪ್ರಶಾಂತ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.