ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ: ಉಡುಪಿಯಲ್ಲಿ ಆರೋಪಿಯ ಮಹಜರು
ಅಜೆಕಾರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಗೆ ದಿನನಿತ್ಯ ವಿಷ ಉಣಿಸಿ, ಬಳಿಕ ಉಸಿರು ಗಟ್ಟಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಕಾರ್ಕಳದ ದಿಲೀಪ್ ಹೆಗ್ಡೆ (28)ಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಅಜೆಕಾರಿನ ದೆಪ್ಪುತ್ತೆ ನಿವಾಸಿ ಸಂಜೀವ ಪೂಜಾರಿ ಎಂಬವರ ಮಗ ಬಾಲಕೃಷ್ಣ ಪೂಜಾರಿ(44) ಅವರನ್ನು ಅವರ ಪತ್ನಿ ಪ್ರತಿಮಾ(36) ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ಅ.20ರಂದು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದರು. ಈ ಬಗ್ಗೆ ಸಂಜೀವ ಪೂಜಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅದೇ ದಿನ ಮಣಿಪಾಲ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ಕಾರಣದ ಕುರಿತ ವರದಿ ಇನ್ನಷ್ಟೆ ಬರಬೇಕಾಗಿದೆ. ವಿಷ ಪ್ರಾಶನ ಕುರಿತು ವರದಿಗಾಗಿ ದೇಹದಲ್ಲಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕಾಗಿದೆ.
ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿರುವ ದಿಲೀಪ್ ಹೆಗ್ಡೆಯನ್ನು ಪೊಲೀಸರು ಮಹಜರು ನಡೆಸಿದ್ದು, ಆತ ವಿಷ ಖರೀದಿಸಿದ ಉಡುಪಿಯ ಒಳಕಾಡುವಿನಲ್ಲಿರುವ ಕೆಮಿಕಲ್ ಅಂಗಡಿಗೆ ಶನಿವಾರ ಕರೆ ತಂದು ಮಹಜರು ನಡೆಸಲಾಯಿತು. ಅಲ್ಲದೆ ಆತನಿಂದ ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್, ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರತಿಮಾಳನ್ನು ಈಗಾಗಲೇ ಕೋರ್ಟ್‌ಗೆ ಹಾಜರು ಪಡಿಸಿ ನ.7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಲೆಗೆ ಸ್ಕೆಚ್: ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಚಿಕಿತ್ಸೆಯ ಬಳಿಕ ಸಾಕಷ್ಟು ಚೇತರಿಸಿದ್ದ ಬಳಿಕ ಅ. 19 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಅಲ್ಲಿಂದ ಹೊರಟು ರಾತ್ರಿ 8 ಗಂಟೆಗೆ ಅಜೆಕಾರಿನ ಮನೆಗೆ ತಲುಪಿದ್ದರು. ಈ ವೇಳೆ ಮನೆಯಲ್ಲಿ ಕೆಲವು ಸಂಬಂಧಿಕರು ಇದ್ದರು. ಎಲ್ಲರೊಂದಿಗೂ ಬಾಲಕೃಷ್ಣ ಮಾತನಾಡಿಕೊಂಡಿದ್ದರು. ಪ್ರತಿಮಾಳ ಅಣ್ಣ ಸಂದೀಪ್ ಮಧ್ಯರಾತ್ರಿಯವರೆಗೂ ಇದ್ದು ಎಲ್ಲರ ಜತೆ ಊಟ ಮಾಡಿ ತೆರಳಿದ್ದರು. ತಂದೆ-ತಾಯಿ ಆಸ್ಪತ್ರೆಯಲ್ಲಿದ್ದಾಗ ಸೋದರ ಮಾವನ ಆಸರೆಯಲ್ಲಿದ್ದ ಮಕ್ಕಳು ಕೂಡ ಆ ದಿನ ರಾತ್ರಿ ಅವರ ಜತೆ ಹೋಗಿದ್ದರು. ಅದಕ್ಕಿಂತ ಮೊದಲೇ ಬಂದಿದ್ದ ಸಂಬಂಧಿಕರೆಲ್ಲರನ್ನೂ ಪ್ರತಿಮಾ ಉಪಾಯ ಮಾಡಿ ಕಳುಹಿಸಿಕೊಟ್ಟಿದ್ದಳು. ಚಿಕ್ಕಮ್ಮ ಹಾಗೂ ಅವರ ಮಕ್ಕಳು ಮನೆಯಲ್ಲಿಯೇ ಇದ್ದರು. ಚಿಕ್ಕಮ್ಮ ರಾತ್ರಿ ಇಲ್ಲೇ ಇರುವುದನ್ನು ಖಾತ್ರಿಪಡಿಸಿಕೊಂಡು ಸಂದೀಪ್ ಅಲ್ಲಿಂದ ತಮ್ಮ ಮನೆಗೆ ತೆರಳಿದ್ದರು. ಆದರೆ ಸಂದೀಪ್ ತೆರಳಿದ ಬಳಿಕ ಚಿಕ್ಕಮ್ಮನ ಮಕ್ಕಳು ಮನೆಗೆ ಹೋಗಲು ಹೊರಟಾಗ ಉಪಾಯದಲ್ಲಿ ಅವರನ್ನೂ ಸಾಗ ಹಾಕಿದ್ದಳು. ಕೆಲವು ದಿನ ಆಸ್ಪತ್ರೆಯಲ್ಲಿದ್ದುದರಿಂದ ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಕಳುಹಿಸಿದ್ದಳು. ಸುಮಾರು 50 ಮೀಟರ್ ದೂರದಲ್ಲಿಯೇ ಅವರ ಮನೆ ಇದ್ದುದರಿಂದ ಅವರು ಮಧ್ಯರಾತ್ರಿ ಮಕ್ಕಳೊಂದಿಗೆ ಮನೆಗೆ ಹೋಗಿದ್ದರು.
ತಂಗಿಯ ಕೃತ್ಯ ಬಯಲಿಗೆ ತಂದ ಸಹೋದರ: ಇಡೀ ಪ್ರಕರಣ ಬೆಳಕಿಗೆ ಬಂದದ್ದು ಮುಖ್ಯವಾಗಿ ಅಣ್ಣನಿಂದ. ತಂಗಿಯ ನಡವಳಿಕೆ ಮತ್ತು ಭಾವನ ದೇಹದ ಮೇಲಿನ ಗಾಯದ ಬಗ್ಗೆ ಸಂಶಯ ಹೊಂದಿದ್ದ ಸಂದೀಪ್ ಪೊಲೀಸರಿಗೆ ದೂರು ನೀಡುವಂತೆ ಬಾಲಕೃಷ್ಣ ಅವರ ತಂದೆಗೆ ಸೂಚಿಸಿದ್ದರು. ಮರಣೋತ್ತರ ಪರೀಕ್ಷೆಗೂ ಸೂಚಿಸಿದ್ದರು. ಈ ನಡುವೆ ಅವರು ಮತ್ತೆ ಮತ್ತೆ ವಿಚಾರಿಸಿದಾಗ ಶುಕ್ರವಾರ ತಂಗಿ ಎಲ್ಲ ವಿಷಯವನ್ನು ಬಾಯಿ ಬಿಟ್ಟಿದ್ದಳು. ಇದನ್ನೆಲ್ಲ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಅವರು ಪೊಲೀಸರಿಗೆ ಎಲ್ಲ ವಿಷಯ ತಿಳಿಸಿದ್ದರು. ಸಮುದಾಯದ ಪದ್ಧತಿಯ ಪ್ರಕಾರ ಪಾರ್ಥಿವ ಶರೀರವನ್ನು ಸುಡಲಾಗಿತ್ತು. ಒಂದು ವೇಳೆ ಪೋಸ್ಟ್ ಮಾರ್ಟಂ ಮಾಡಿರದೆ ಇರುತ್ತಿದ್ದರೆ ಯಾವುದೇ ಸಾಕ್ಷ್ಯಗಳು ಇಲ್ಲವಾಗುವ ಸಾಧ್ಯತೆ ಇತ್ತು. ಪೋಸ್ಟ್ ಮಾರ್ಟಂ ವರದಿ ಇನ್ನಷ್ಟೇ ಕೈ ಸೇರಬೇಕಾಗಿದೆ.
ಬಂಗಾರದಂತಹ ಭಾವ…ಕೊರೊನಾ ಬಳಿಕ ಊರಿಗೆ ಬರುವ ಮೊದಲು ಸಂದೀಪ್ ಅವರು ಆರು ವರ್ಷ ಮುಂಬಯಿಯಲ್ಲಿ ಬಾಲಕೃಷ್ಣ ಅವರ ಜತೆಯಲ್ಲಿ ಅವರ ರೂಮಿನಲ್ಲಿಯೇ ವಾಸವಾಗಿದ್ದರು. ಬಾಲಕೃಷ್ಣ ಅವರಿಗೆ ತಂಗಿಯನ್ನು ಮದುವೆ ಮಾಡಿ ಕೊಡುವ ಮೊದಲೇ ಸಂದೀಪ್ ಅವರ ಆತ್ಮೀಯ ಗೆಳೆಯರಾಗಿದ್ದರು. ಭಾವನ ಕೊಲೆಯ ಬಳಿಕ ಸಂದೀಪ್ ಅವರು ಪ್ರತಿಮಾಳ ವಿಚಾರಣೆ ಮಾಡುತ್ತ “ಬಂಗಾರದಂತಹ ಭಾವನನ್ನು ಕೊಲೆ ಮಾಡಿದೆಯಲ್ಲವೇ’ ಎಂದು ಹೇಳಿದ್ದು ಎಲ್ಲೆಡೆ ವೈರಲ್ ಆಗಿದೆ. ಕೊರೊನಾ ಬಳಿಕ ಊರಿಗೆ ಬಂದು ಸಂದೀಪ್ ಅಂಗಡಿ ನಡೆಸುತ್ತಿದ್ದರೆ, ಬಾಲಕೃಷ್ಣ ನಿಟ್ಟೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ವರ್ಷದ ಹಿಂದೆ ಹೊಸ ಮನೆ ಕಟ್ಟಿಸಿದ್ದ ಬಾಲಕೃಷ್ಣ ಅವರು ಆರು ತಿಂಗಳ ಹಿಂದೆ ಪತ್ನಿಗಾಗಿ ಬ್ಯೂಟಿ ಪಾರ್ಲರ್ ಮಾಡಿಸಿ ಕೊಟ್ಟಿದ್ದರು.