ಬಾರಕೂರು ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ
ಬ್ರಹ್ಮಾವರ: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇಲ್ಲಿನ ಗಣಕ ವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ನೀವಿಯಸ್ ಸೆಲ್ಯೂಷನ್ ಮತ್ತು ಮೈಕ್ರೊಡಿಗ್ರಿ, ಮಂಗಳೂರು ಸಾಫ್ಟ್ವೇರ್ ಕಂಪನಿ ವತಿಯಿಂದ 20 ಲ್ಯಾಪ್‌ಟಾಪ್ ಗಳನ್ನು ದೇಣಿಗೆ ನೀಡಲಾಯಿತು.
ನೀವಿಯಸ್ ಸೆಲ್ಯೂಷನ್, ಮಂಗಳೂರು ಕಂಪನಿಯ ವಿನೀತ್ ಸರ್ವೋತ್ತಮ ಹಾಗೂ ಅಶ್ವಿನ್ ಮತ್ತು ಮೈಕ್ರೊಡಿಗ್ರಿ ಕಂಪನಿಯ ಪ್ರಜ್ವಲ್ ಮತ್ತು ಯಶಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಗಂಗಾಧರಯ್ಯ ಇವರು ಮೈಕ್ರೊಡಿಗ್ರಿಯ ಗೌರವ್ ಮತ್ತು ಅವರ ತಂಡದ ಸತತ ಪ್ರಯತ್ನ ಹಾಗೂ ನೀವಿಯಸ್ ಸೆಲ್ಯೋಷನ್ ಇವರ ಉದಾರ ದೇಣಿಗೆಯನ್ನು ಸ್ಮರಿಸಿದರು.ಮುಂದುವರೆದು ಕೊಡುಗೆಯಾಗಿ ದೊರೆತಿರುವ ಲ್ಯಾಪ್‌ಟಾಪ್‌ಗಳು ಬರೀ ಗಣಕಯಂತ್ರಗಳಲ್ಲದೇ, ಇವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಆಶಾಕಿರಣ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಆರ್., ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ದೇಣಿಗೆಯಾಗಿ ದೊರೆತಿರುವ 20 ಲ್ಯಾಪ್‌ಟಾಪ್‌ಗಳು ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಭೂತ ಸೌರ‍್ಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಸ್ಮರಿಸಿ, ನೀವಿಯಸ್ ಹಾಗೂ ಮೈಕ್ರೊಡಿಗ್ರಿ ಕಂಪೆನಿಗೆ ಧನ್ಯವಾದ ತಿಳಿಸಿದರು. ನೀವಿಯಸ್ ಸೊಲ್ಯುಷನ್ ಕಂಪೆನಿಯ ವಿನೀತ್ ಸರ್ವೊತ್ತಮ ಇವರು ಕ್ಲೌಡ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ತಮ್ಮ ಕಂಪೆನಿಯ ವಿಶೇಷ ಪರಿಣತಿ ಹಾಗೂ ಕೊಡುಗೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಮೈಕ್ರೊಡಿಗ್ರಿಯ ಪ್ರಜ್ವಲ್ ಹಾಗೂ ಯಶಸ್, ಮೈಕ್ರೊಡಿಗ್ರಿ ವತಿಯಿಂದ ಬಾರಕೂರಿನ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುವ ಉಚಿತ ಆನ್‌ಲೈನ್ ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ವಿದ್ಯಾ ಪಿ., ವಿದ್ಯಾರ್ಥಿ ಕ್ಷೇಮಪಾಲಕರಾದ ಶ್ರೀ ಹರೀಶ್ ಸಿ. ಕೆ., ಅಕಾಡೆಮಿಕ್ ಕೌನ್ಸಿಲ್‌ನ ಮುಖ್ಯಸ್ಥರಾದ ಡಾ. ಮಧು ಎನ್. ಎಂ., ಗಣಕ ವಿಜ್ಞಾನದ ಉಪನ್ಯಾಸಕರಾದ ರಾಘವೇಂದ್ರ ಎಚ್. ಎಸ್., ಮುಜತಾಬ ಫರ್ಹೀನ್ ಹಾಗೂ ಅಪಾರ ವಿದ್ಯಾರ್ಥಿ ಬಳಗ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.