ಚುನಾವಣೆಗಳಲ್ಲಿ ನಿರಂತರ ಸೋಲು: ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ – ಗಾಂಧಿ ನಾಯಕತ್ವದ ಪ್ರಶ್ನೆಗೆ ಮರುಜೀವ
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರಿಸುತ್ತಿರುವ ದೇಶದ ಅತ್ಯಂತ ಹಳೆಯ ದೊಡ್ಡ ಪಕ್ಷವಾದ ಕಾಂಗ್ರೆಸ್ ನ ಸೋಲು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಮುಂದುವರಿದಿದೆ.
ರಾಜ್ಯಗಳ ಅಥವಾ ಕೇಂದ್ರ ಮಟ್ಟದಲ್ಲಿ ಲೋಕಸಭೆ ಚುನಾವಣೆಗಳಲ್ಲಿ ಸೋಲು-ಗೆಲುವು ಕಂಡಾಗ ಸಹಜವಾಗಿ ಯಾವುದೇ ಪಕ್ಷದಲ್ಲಿ ಒಂದಷ್ಟು ಚರ್ಚೆಗಳು, ಬದಲಾವಣೆ, ಅಸಮಾಧಾನ, ಭಿನ್ನಮತೀಯ ಕಂಡುಬರುವುದು ಸಾಮಾನ್ಯ. ಕಾಂಗ್ರೆಸ್ ನಲ್ಲಿ ಕೂಡ ಈ ಬಾರಿ ಅದೇ ಆಗಿದೆ.
ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷರ ವಿಚಾರದಲ್ಲಿ ಕೆಲ ತಿಂಗಳ ಹಿಂದೆ ಉನ್ನತ ಮಟ್ಟದ ಹಿರಿಯ ನಾಯಕರಲ್ಲಿ ಅಸಮಾಧಾನ ತಲೆದೋರಿ ಅದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಯಾಗಿತ್ತು. ಎರಡು ಗುಂಪುಗಳಾಗಿದೆ ಎಂಬ ಸುದ್ದಿ ಕೂಡ ಕೇಳಿಬಂದಿತ್ತು. ಬಿಹಾರದಲ್ಲಿ ಆರ್ ಜೆಡಿಯ ತೇಜಸ್ವಿ ಯಾದವ್ ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಗ್ಗೆಯೂ ಈಗ ಅಸಮಾಧಾನ ಹೊರಬರುತ್ತಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 19 ಸೀಟುಗಳನ್ನು. ಅದೇ ಆರ್ ಜೆಡಿ ಸ್ಪರ್ಧಿಸಿದ್ದ 144 ಕ್ಷೇತ್ರಗಳಲ್ಲಿ 75 ಕ್ಷೇತ್ರಗಳಲ್ಲಿ ಗೆದ್ದಿದೆ. ಅದೇ ಸಿಪಿಎಂಎಲ್ ಸ್ಪರ್ಧಿಸಿದ 19 ಸೀಟುಗಳಲ್ಲಿ 12 ಸೀಟುಗಳನ್ನು ಗೆದ್ದಿದ್ದು ಕಾಂಗ್ರೆಸ್ ಗೆ ಅವಮಾನವಾದಂತಾಗಿದೆ.
ಅಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು, ಎಐಎಂಐಎಂ ವಿಚಾರಗಳು, ಮೂರು ಮತ್ತು ಅಂತಿಮ ಹಂತದ ವೋಟಿಂಗ್ ನಲ್ಲಿ ಮತಗಳ ಧ್ರುವೀಕರಣ ಈ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ವರ್ಷ 5 ರಾಜ್ಯಗಳಾದ ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೆರಿಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನ ಬಿಹಾರದಲ್ಲಿನ ಕಳಪೆ ಪ್ರದರ್ಶನ ಕೇಂದ್ರ ನಾಯಕತ್ವ ಮತದಾರರಲ್ಲಿ ವಿಶ್ವಾಸವನ್ನು ಮೂಡಿಸಿ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು, ಸಂಘಟನೆ ತೋರಿಸಲು ವಿಫಲವಾಗಿದೆ ಎಂಬುದು ಗೊತ್ತಾಗುತ್ತದೆ.
ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷ, ತಮಿಳು ನಾಡಿನಲ್ಲಿ ಡಿಎಂಕೆ ಮೈತ್ರಿ, ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಅಸ್ಸಾಂ ಮತ್ತು ಕೇರಳದಲ್ಲಿ ಸಂಘಟನೆ ಕಾಂಗ್ರೆಸ್ ಗೆ ಬಲಿಷ್ಠವಾಗಿದ್ದರೆ ಪಶ್ಚಿಮ ಬಂಗಾಳ, ತಮಿಳು ನಾಡಿನಲ್ಲಿ ದುರ್ಬಲವಾಗಿದೆ.
ಬಿಹಾರದಲ್ಲಿ ಮಹಾಘಟಬಂಧನ ಮೈತ್ರಿ ಮತದಾರರನ್ನು ಓಲೈಸಲಿಲ್ಲ. ಸಂಘಟನೆಯ ರಚನೆ ಕೊರತೆಯಿರುವಾಗ ಇಡೀ ಚುನಾವಣೆಯ ನಿರ್ವಹಣೆ ಮಾಡಿದ್ದು ದೆಹಲಿಯಲ್ಲಿ ಕುಳಿತುಕೊಂಡು ರಾಹುಲ್ ಗಾಂಧಿಯವರು.
ಈ ಮಧ್ಯೆ ಮುಂದಿನ ವರ್ಷದ ಚುನಾವಣೆಯ ಮುನ್ನ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ರಾಹುಲ್ ಗಾಂಧಿ ಅಥವಾ ಬೇರೊಬ್ಬರಿಗೆ ನೀಡಲೇಬೇಕು. ಚುನಾವಣೆಗಳಲ್ಲಿ ಸತತ ಸೋಲು, ಸಂಘಟನೆ ಕೊರತೆ ಇವೆಲ್ಲವೂ ಕಾಂಗ್ರೆಸ್ ಗೆ ಮುಂದಿನ ಚುನಾವಣೆಗಳನ್ನು ಎದುರಿಸಲು ಮತ್ತು ರಾಷ್ಟ್ರಾಧ್ಯಕ್ಷರ ನೇಮಕ ವಿಚಾರದಲ್ಲಿ ಭಾರೀ ಸವಾಲಾಗಿದೆ ಎನ್ನಬಹುದು.
ಕಳೆದ ಬಾರಿ ಕಾಂಗ್ರೆಸ್ ಗೆ ಪೂರ್ಣ ಪ್ರಮಾಣದ ಬಲಿಷ್ಠ ನಾಯಕತ್ವ ಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯಿಸಿ ಪತ್ರ ಬರೆದಂತೆ ಈ ಬಾರಿ ಕೂಡ ಗಾಂಧಿ ಕುಟುಂಬದ ಮೇಲೆ ಒತ್ತಡ ಬಂದರೆ ಅಚ್ಚರಿಯಿಲ್ಲ.