ಡಿ.1: ಮಲ್ಪೆಯಲ್ಲಿ ‘ಉಡುಪಿ ಮ್ಯಾರಥಾನ್ -2024’
ಉಡುಪಿ: ಲೊಂಬಾರ್ಡ್ ಆಸ್ಪತ್ರೆಯ 101ನೇ ವಾರ್ಷಿಕೋತ್ಸವ ಹಾಗೂ ಉಡುಪಿ ರನ್ನರ್ಸ್ ಕ್ಲಬ್‌ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಲೊಂಬಾರ್ಡ್ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವ ಧೈಯದೊಂದಿಗೆ “ಉಡುಪಿ ಮ್ಯಾರಥಾನ್-2024” ನ್ನು ಡಿಸೆಂಬರ್ 1ರಂದು ಮಲ್ಪೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶಿಲ್ ಜತ್ತನ್ನ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಗೆ ವಿವಿಧ ರಾಜ್ಯಗಳಿಂದ ಅಂದಾಜು 1500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮ್ಯಾರಥಾನ್ ಬೆಳಿಗ್ಗೆ 5 ಗಂಟೆಗೆ ಮಲ್ಪೆ ಸೀ ವಾಕ್ ನಿಂದ ಆರಂಭಗೊಳ್ಳಲಿದ್ದು, ಪಡುಕೆರೆ ಮಾರ್ಗವಾಗಿ ಉದ್ಯಾವರ-ಮಟ್ಟು ವರೆಗೆ ತಲುಪಿ, ನಂತರ ಹಿಂತಿರುಗಿ ಸೀ-ವಾಕ್‌ನಲ್ಲಿ ಸಮಾಪನಗೊಳ್ಳಲಿದೆ ಎಂದರು.
ವಿಶ್ವ ಮಧುಮೇಹ ದಿನದ ಅಂಗವಾಗಿ ಲೊಂಬಾರ್ಡ್ ಆಸ್ಪತ್ರೆ ಮಿಷನ್ ಕಂಪೌಂಡಿನಿಂದ ಉಡುಪಿ ಪೇಟೆಯ ಸುತ್ತ ಮ್ಯಾರಥಾನ್ ಪೂರ್ವಭಾವಿ ಓಟ “ಪ್ರೋಮೋ ರನ್”ನ್ನು ನ.24ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉಡುಪಿ ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ಡಾ.ತಿಲಕ್ ಚಂದ್ರ ಪಾಲ್ ಮಾತನಾಡಿ, ಸ್ಪರ್ಧೆಯು 18 ವರ್ಷದಿಂದ 35 ವರ್ಷ, 36 ವರ್ಷದಿಂದ 50 ವರ್ಷ ಹಾಗೂ 51 ವರ್ಷದಿಂದ ಮೇಲ್ಪಟ್ಟವರು ಹೀಗೆ 3 ವಿಭಾಗಗಳಲ್ಲಿ ನಡೆಯಲಿದ್ದು, ಪುರುಷ ಮತ್ತು ಮಹಿಳೆಯರಿಗೆ 21 ಕಿ.ಮೀ., 10 ಕಿ.ಮೀ., 5 ಕಿ.ಮೀ. ಓಟದ ಸ್ಪರ್ಧೆ ಜರುಗಲಿದೆ. 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 5 ಕಿ.ಮೀ. ಮತ್ತು 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 3 ಕಿ.ಮೀ. ಪ್ರತ್ಯೇಕ ಓಟದ ಸ್ಪರ್ಧೆಯನ್ನು ಆಯೋಜಿಸ ಲಾಗಿದೆ. ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುವುದು. ಮ್ಯಾರಥಾನ್ ಗೆ ನೋಂದಾವಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ನವಂಬರ್ 21 ನೋಂದಣಿಗೆ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ 98447 41471, 98862 45661, 81055 35847 ಅಥವಾ ವೆಬ್ ಸೈಟ್ (https://www.townscript.com/e/udupi-marathon-002131) ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ರನ್ನರ್ಸ್ ಕ್ಲಬ್‌ನ ಕಾರ್ಯದರ್ಶಿ ದಿವಾಕರ ಗಣಪತಿ ನಾಯಕ್, ಸತೀಶ್, ಉದಯ ಕುಮಾರ್ ಶೆಟ್ಟಿ, ಮಿಷನ್ ಆಸ್ಪತ್ರೆಯ ಆಡಳಿತಾಧಿಕಾರಿ ಡಿನಾ ಪ್ರಭಾವತಿ ಇದ್ದರು.