ಉಡುಪಿ: ಅ.28 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗವಿಕಲರ ಧರಣಿ
ಉಡುಪಿ, ಅ.26: ತಮಗೆ ನೀಡಲಾಗುತ್ತಿರುವ ಮಾಸಾಶನದ ಮೊತ್ತದಲ್ಲಿ ಹೆಚ್ಚಳವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಅಂಗವಿಕಲರು ಹಾಗೂ ಪಾಲಕರು ಅ.28ರ ಸೋಮವಾರ ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಮುಂದೆ ಧರಣಿ ನಡೆಸಲಿದ್ದಾರೆ ಎಂದು ಉಡುಪಿ ಕೊಡವೂರಿನ ದಿವ್ಯಾಂಗ ರಕ್ಷಣಾ ವೇದಿಕೆಯ ವಿಜಯ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಅಂಗವಿಕಲರ ವಿವಿಧ ಸಂಘಟನೆಗಳು ಈ ಧರಣಿಯನ್ನು ಆಯೋಜಿಸಿವೆ ಎಂದರು.
ಪರಾವಲಂಬಿಗಳಾಗಿ ಜೀವನ ಸಾಗಿಸಬೇಕಾಗಿರುವ ವಿವಿಧ ರೀತಿಯ ಅಂಗ ವೈಕಲ್ಯ ಹೊಂದಿರುವ ಅಂಗವಿಕಲರಿಗೆ ಈಗ ಸರಕಾರ 800ರಿಂದ 1400ರೂ.ಗಳ ಮಾಸಾಶನ ನೀಡುತ್ತಿದೆ. ಇದನ್ನು ಶೇ.74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಕನಿಷ್ಠ 5000ರೂ.ಗೆ ಏರಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ ಎಂದರು.
ಪ್ರತಿ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಾಗಿಡುತ್ತಿರುವ ಶೇ.5 ಅನುದಾನವನ್ನು ಇಲಾಖೆಗಳು ಬೇಕಾಬಿಟ್ಟಿಯಾಗಿ ಖರ್ಚು ಮಾಡುತಿದ್ದು, ಅದನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಖರ್ಚು ಮಾಡುವಂತೆ ನೋಡಿಕೊಳ್ಳ ಬೇಕು. ಅಲ್ಲದೇ ಅಂಗವಿಕಲರ ಹಕ್ಕುಗಳ ಕಾಯ್ದೆ-2016ನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂಬುದು ಇವರ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಸಂತೋಷ ಜಾಲಾಡಿ,ರವೀಂದ್ರಹೆಮ್ಮಾಡಿ, ಹರೀಶಕೊಪ್ಪಲತೋಟ, ಹರೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.