ಕೇಂದ್ರ ಸರ್ಕಾರದ ದೀಪಾವಳಿ ಗಿಫ್ಟ್: ಹೊಸ ಯೋಜನೆ ಘೋಷಣೆ
ನವದೆಹಲಿ: ದೇಶದಲ್ಲಿ ಆರ್ಥಿಕ ಪುನಶ್ಚೇತನ ಕಾಣುವ ಲಕ್ಷಣ ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯ ನ್ಯಾಶನಲ್ ಮೀಡಿಯಾ ಸೆಂಟರ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕತೆ ಚೆನ್ನಾಗಿ ಪುನಶ್ಚೇತನಗೊಳ್ಳುವ ಕೆಲವು ಸೂಚನೆ ಕಂಡುಬರುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಲಾಕ್ ಡೌನ್ ನಿಂದ ಉಂಟಾದ ಸಮಸ್ಯೆಯಿಂದ ಹೊರಬರಲು ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಸಕ್ರಿಯ ಕೇಸುಗಳು ಸಹ ದೇಶದಲ್ಲಿ 10 ಲಕ್ಷದಿಂದ ಇಳಿಕೆಯಾಗುತ್ತಿದ್ದು ಸದ್ಯ 4.89 ಲಕ್ಷ ಸಕ್ರಿಯ ಕೇಸುಗಳು ಮತ್ತು ಮೃತರ ಸಂಖ್ಯೆ ಶೇಕಡಾ 1.47ರಷ್ಟು ಇಳಿಕೆಯಾಗಿದೆ ಎಂದರು.
ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿದ ಕೇಂದ್ರ ಸರ್ಕಾರ: ಇದೇ ಸಂದರ್ಭದಲ್ಲಿ ಪ್ರೋತ್ಸಾಹಕ ಪ್ಯಾಕೇಜ್ ಗಳನ್ನು ಘೋಷಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಪಿಎಂ ಆವಾಸ್ ಯೋಜನೆಯಡಿ ನಗರ ಪ್ರದೇಶಗಳ ಜನರಿಗೆ ನೀಡಲು 18 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಹೊಸ ಉದ್ಯೋಗಗಳಿಗೆ ಎರಡು ವರ್ಷಗಳವರೆಗೆ ನಿವೃತ್ತಿ ನಿಧಿಯಡಿ ಕೊಡುಗೆ ನೀಡಲು ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ.
ಕೋವಿಡ್-19 ಪುನಶ್ಚೇತನ ಹಂತದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಹೊಸ ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆಯನ್ನು ಘೋಷಿಸಿದೆ.
ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡು ಯೋಜನೆಯನ್ನು ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗುತ್ತದೆ ಎಂದು ಕೂಡ ಹೇಳಿದರು. ದೇಶದ ರೈತರಿಗೆ ಹೆಚ್ಚುವರಿ ತುರ್ತು ಕಾರ್ಯ ಸಂಗ್ರಹ ನಿಧಿಯಿಂದ ನಬಾರ್ಡ್ ಮೂಲಕ 25 ಸಾವಿರ ಕೋಟಿ ರೂಪಾಯಿಗಳನ್ನು ವಿತರಣೆ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡು ಮೂಲಕ ರೈತರಿಗೆ 2.5 ಕೋಟಿ ರೂಪಾಯಿಗಳನ್ನು, 1.4 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ವಿನಿಮಯ ಮಾಡಲಾಗಿದೆ ಎಂದರು.