ಅ.27: “ಸಾಂಪ್ರದಾಯಿಕ ಉಡುಪಿ ಶೈಲಿ ಪಿಲಿ ಒರಿಪುಗ” ಅಭಿಯಾನ
ಉಡುಪಿ: ಕರಾವಳಿ ಕರ್ನಾಟಕದ ಜಾನಪದ ಕಲೆಗಳಲ್ಲಿ ಮುಂಚೂಣಿಯಲ್ಲಿರುವ ಒಂದು ಕಲೆ ಎಂದರೆ ಅದು ಹುಲಿವೇಷ ಕುಣಿತ. ಅದೆಷ್ಟೋ ಮಂದಿ ತುಳುವರು ಸೇರಿದಂತೆ ಕರಾವಳಿ ಮಂದಿ ಆರಾಧಿಸಿಕೊಂಡು ಬಂದಿರುವ ಈ ಪವಿತ್ರ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಉಡುಪಿ ಶೈಲಿ ಪಿಲಿ ಒರಿಪುಗ ಅಭಿಯಾನ ಉಡುಪಿಯಲ್ಲಿ ಅ.27ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ 80ಕ್ಕೂ ಮಿಕ್ಕಿದ ಹುಲಿವೇಷ ತಂಡಗಳು ಈ ಒಂದು ಬೃಹತ್ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ತಾಸೆ, ಡೋಲು, ವಾದ್ಯಗಳ ಹಿಮ್ಮೇಳದೊಂದಿಗೆ ಅದ್ದೂರಿಯಾಗಿ ಹೊರಡಲಿರುವ ಈ ಪಾದಯಾತ್ರೆ ಕಾರ್ಯಕ್ರಮವು ಉಡುಪಿ ನಗರದ ಮೂಲಕವಾಗಿ ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಮಾಪ್ತಿಗೊಳ್ಳಲಿದೆ.
ಬಹಳಷ್ಟು ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಲಿರುವ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಉಡುಪಿ ಜಿಲ್ಲೆಯ ಹಲವಾರು ಹುಲಿವೇಷ ತಂಡಗಳ ಸದಸ್ಯರು, ಹಿಮ್ಮೇಳ ವಾದಕರು, ಬಣ್ಣಗಾರಿಕೆಯ ಕಲಾವಿದರು, ಹಿರಿಯ ಹುಲಿವೇಷಧಾರಿಗಳು ಸೇರಿದಂತೆ ಬಹಳಷ್ಟು ಮಂದಿ ಉಡುಪಿ ಶೈಲಿಯ ಹುಲಿವೇಷದ ಮೇಲಿನ ಅಭಿಮಾನದಿಂದ ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.