ಇಂದ್ರಾಳಿ ರಾ.ಹೆದ್ದಾರಿ ಸೇತುವೆ ಕಾಮಗಾರಿ ವಿಳಂಬ: ಅ.29 ರಂದು ಬೃಹತ್ ಪ್ರತಿಭಟನೆಗೆ ಕರೆ

ಉಡುಪಿ: ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಪರೀತ ವಿಳಂಬವನ್ನು ವಿರೋಧಿಸಿ ಅ. 29 ರಂದು ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಉಡುಪಿಯ ಡಯಾನ ಹೊಟೇಲಿನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ಅಮೃತ್ ಶೆಣೈ, “ಉಡುಪಿ ನಗರ ಬೆಳೆಯುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಜನ ಬರುತ್ತಾರೆ. ಉಡುಪಿಯಿಂದ ಮಣಿಪಾಲ ಆಸ್ಪತ್ರೆಗೆ ಹೋಗುವವರಿದ್ದಾರೆ. ಇಂದ್ರಾಳಿ ಸೇತುವೆ ಕಾಮಗಾರಿಯನ್ನು ವಿಳಂಬದಿಂದಾಗಿ ದಿನನಿತ್ಯ ಅಪಘಾತಗಳ ಸರಮಾಲೆ ನಡೆಯುತ್ತಿದ್ದರೂ, ಕಾಮಗಾರಿಯ ಮುಕ್ತಾಯವಾಗುವ ಲಕ್ಷಣಕಾಣುತ್ತಿಲ್ಲ.

ಆ ಪ್ರದೇಶಗಳಲ್ಲಿ ಹಲವು ಅಪಘಾತ, ಸಾವುನೋವುಗಳು ಸಂಭವಿಸಿವೆ. ವಿಶೇಷವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮಹಿಳೆಯರು ಅಪಘಾತಕ್ಕೊಳಪಡುತ್ತಿದ್ದಾರೆ. ಟ್ರಾಫಿಕ್ ಜಾಮ್’ ನಿಂದಾಗಿ ಆ ಪ್ರದೇಶದಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿದೆ‌. ಈ ಸಮಸ್ಯೆ ಬಗೆಹರಿಸಲು ಹಲವು ಬಾರಿ‌ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು.

ಈ ಸಮಸ್ಯೆ ಉಡುಪಿ ಜಿಲ್ಲೆಯ ಎಲ್ಲ ನಾಗರಿಕರ ಸಮಸ್ಯೆ. ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ಮಸೀದಿ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು ಇದೆ. ಅಲ್ಲಿ ಸಂಚರಿಸುವವರಿಗೆ ಅಪಘಾತವಾಗುವ ಜೀವಭಯದಲ್ಲೇ ಇರುತ್ತಾರೆ. ಈ ಸಮಸ್ಯೆಯಿಂದ ನಾಗರಿಕರು ಬೆಸೆತ್ತು ಹೋಗಿದ್ದು ಅದಕ್ಕಾಗಿ ಈ ಬಾರಿ ರಾಜಕೀಯ ಪಕ್ಷ, ಸಾಮಾಜಿಕ ಹೋರಾಟಗಾರರು ಸೇರಿ ಸೇತುವೆ ಬಳಿ ಎರಡು ಗಂಟೆ ಪ್ರತಿಭಟನಾ ಸಭೆ ಆಯೋಜಿಸುತ್ತಿದ್ದೇವೆ. ಈ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಜನವರಿ ಅಂತ್ಯದ ಒಳಗೆ ಈ ಸೇತುವೆಯನ್ನು ಜನ ಬಳಕೆಗೆ ಬಿಡಬೇಕು ಎಂಬುವುದು ನಮ್ಮ ಬೇಡಿಕೆ. ರೈಲ್ವೆ ಸಚಿವರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ರೈಲ್ವೆ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿದೆ ಎಂದರು.

ನಮ್ಮ ಬೇಡಿಕೆ ಕ್ಲಪ್ತ ಸಮಯದಲ್ಲಿ ಈಡೇರದಿದ್ದರೆ ಜನವರಿ 3೦ ಕ್ಕೆ ದೊಡ್ಡ ಹೋರಾಟ ಸಂಘಟಿಸಲಾಗುವುದು. ಧರಣೆ, ಸಂಸದರ ಮನೆಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟ ಸಂಘಟಿಸುತ್ತೇವೆ ಅದಕ್ಕಿಂತ ಮುನ್ನ ಸರಕಾರ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಹೆಬ್ಬಾರ್, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್, ಜಯನ್ ಮಲ್ಪೆ ಕುಶಾಲ್ ಶೆಟ್ಟಿ, ಅಝೀಝ್ ಉದ್ಯಾವರ, ಕೀರ್ತಿ ಶೆಟ್ಟಿ, ಪೀರ್ ಮುಹಮ್ಮದ್ ಸಾಹೇಬ್, ಸುರೇಶ್ ಶೆಟ್ಟಿ ಬನ್ಬಂಜೆ, ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಮಹಾಬಲ ಕುಂದರ್, ಚಂದ್ರಮೋಹನ್, ಶ್ರೀಧರ್, ಜಾನಾಕಿ, ಗಣೇಶ್ ನೇರ್ಗಿ, ಸೃಜನ್ ಶೆಟ್ಟಿ, ಸಜ್ಜನ್ ಶೆಟ್ಟಿ, ಚಾರ್ಲ್ಸ್ ಅಂಬ್ಲೇರ್, ರಮೇಶ್ ತಿಂಗಳಾಯ, ಸುರೇಂದ್ರ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!