ಕಾರ್ಕಳ: ಪತ್ನಿಯ ಇಸ್ಟ್ರಾಗ್ರಾಮ್ ಲವ್‌ಗೆ ಪತಿ ಬಲಿ…?

Oplus_131072

ಕಾರ್ಕಳ: ಕಾಮಾಲೆ ರೋಗದಿಂದ ಬಳಲುತ್ತಿದ್ದ ಪತಿಯ ಸಾವಿಗೆ ವಿಚಿತ್ರ ತಿರುವು ಪಡೆದಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸಂಶಯಾಸ್ಪದವಾಗಿ ಮೃತಪಟ್ಟ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಪ್ರಕರಣಕ್ಕೆ ಸ್ಪೋಟಕ ತಿರುವು ಲಭಿಸಿದ್ದು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಮೃತಪಟ್ಟ ಬಾಲಕೃಷ್ಣ ಪೂಜಾರಿ ಪತ್ನಿ ಪ್ರತಿಮಾ(36) ಹಾಗೂ ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್‌ ಹೆಗ್ಡೆ(28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಬಾಲಕೃಷ್ಣ ಪೂಜಾರಿ ಸಾವಿನ ಕುರಿತು ಹುಟ್ಟಿಕೊಂಡಿದ್ದ ಅನುಮಾನಕ್ಕೆ ಇದೀಗ ಪ್ರಬಲ ಸಾಕ್ಷ್ಯ ಲಭಿಸಿದಂತಾಗಿದೆ.

ಘಟನೆಯ ಹಿನ್ನೆಲೆ:

ಮೃತ ಬಾಲಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ಪ್ರತಿಮಾ ತಮ್ಮ ಇಬ್ಬರು ಮಕ್ಕಳ ಜತೆ ಅನ್ಯೋನ್ಯವಾಗಿದ್ದರು. ಮದುವೆಯಾದ ಬಳಿಕ ಬಾಲಕೃಷ್ಣ ಪೂಜಾರಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಮುಂಬಯಿನಲ್ಲಿ ನೆಲೆಸಿದ್ದರು. ಕೋವೀಡ್ ಬಳಿಕ ಊರಿಗೆ ಬಂದು ಜೀವನ ನಿರ್ವಹಣೆಗೆಂದು ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಟೀನ್‌ ನಡೆಸುತ್ತಿದ್ದರು. ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಕಳೆದ ನವೆಂಬರ್ ನಲ್ಲಿ ಹೊಸ ಮನೆಯನ್ನೂ ಕಟ್ಟಿಸಿದ್ದರು. ಬಳಿಕ ಪತ್ನಿ ಪ್ರತಿಮಾಳಿಗೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು. ತಾನು ಕ್ಯಾಂಟೀನಲ್ಲಿ ದುಡಿಯುತ್ತಿದ್ದರೂ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.

ಪತ್ನಿಯ ಇಸ್ಟ್ರಾಗ್ರಾಮ್ ಪ್ರೇಮಕ್ಕೆ ಪತಿಯ ಜೀವಕ್ಕೆ ಕುತ್ತು:

ಬಾಲಕೃಷ್ಣ ಪೂಜಾರಿ ತಾನು ಕ್ಯಾಂಟೀನಿನಲ್ಲಿ ದುಡಿಯುತ್ತಿದ್ದರೂ ಪತ್ನಿ ಹಾಗೂ ಮಕ್ಕಳಿಗೆ ಏನೂ ಕಡಿಮೆ ಮಾಡಿರಲಿಲ್ಲ.ಅಜೆಕಾರಿನಲ್ಲಿ ಪ್ರತಿಮಾ ಮೇಕ್ ಓವ‌ರ್ ಎನ್ನುವ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರತಿಮಾ ಫೇಸ್ಬುಕ್ ಹಾಗೂ ಇಸ್ಟ್ರಾಗ್ರಾಮ್ ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದಳು. ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಆರೋಪಿ ಪ್ರತಿಮಾ ಫೇಸ್‌ಬುಕ್ ಹಾಗೂ ಇಸ್ಟ್ರಾಗ್ರಾಮ್ ನಲ್ಲಿ ‘ಪ್ರತಿ ಮೇಕ್ ಓವ‌ರ್ ಎಂಬ ಪೇಜ್ ತೆರೆದು ತನ್ನ ಡಿಫರೆಂಟ್ ರೀಲ್ಸ್’ಗಳನ್ನು ಅಪಲೋಡ್ ಮಾಡುತ್ತಿದ್ದಳು. ಈ ನಡುವೆ ಪ್ರತಿಮಾಳಿಗೆ ಇಸ್ಟ್ರಾಗ್ರಾಮ್ ಮೂಲಕ ಕಾರ್ಕಳದ ಹೊಟೇಲ್ ಹಾಗೂ ಲಾಡ್ಡಿಂಗ್ ಮಾಲಕನ ಪುತ್ರ ದಿಲೀಪ್ ಹೆಗ್ಡೆ ಎಂಬಾತ ಸ್ನೇಹವಾಗಿದೆ. ಆರಂಭದಲ್ಲಿ ಪರಿಚಯ ಬಳಿಕ ಇದು ತೀರಾ ಸಲುಗೆಯ ಮಟ್ಟಕ್ಕೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೂ ಕಾರಣವಾಯಿತು. ಪತ್ನಿಯ ಕಳ್ಳಾಟದ ವಿಷಯ ತಿಳಿಯುತ್ತಿದ್ದಂತೆಯೇ ಪತಿ ಬಾಲಕೃಷ್ಣ ಪೂಜಾರಿ ಮಾನಸಿಕವಾಗಿ ಕುಗ್ಗಿದ್ದರು. ಈ ವಿಷಯವನ್ನು ಪತ್ನಿಯ

ಅಣ್ಣನ ಗಮನಕ್ಕೆ ತಂದಿದ್ದರು. ಬಳಿಕ ಇವರಿಬ್ಬರ ಲವ್ ಕಹಾನಿ ಅಜೆಕಾರು ಪೊಲೀಸ್‌ ಠಾಣೆಗೂ ಹೋಗಿತ್ತು. ಬಳಿಕ ಇಬ್ಬರನ್ನು ಕರೆಸಿ ಮುಚ್ಚಳಿಕೆ ಬರೆಯಿಸಿ ಪೊಲೀಸರು ಎನ್‌ಸಿಆ‌ರ್ ದಾಖಲಿಸಿದ್ದರು ಎಂದು ಪ್ರತಿಮಾ ಅಣ್ಣ ಸಂದೀಪ್‌ ಅವರು ನಡೆದಿದ್ದ ಘಟನೆಯನ್ನು ವಿವರಿಸಿದ್ದಾರೆ.

ಈ ಪ್ರಕರಣದ ಬಳಿಕ ಮಾನಸಿಕವಾಗಿ ಸಾಕಷ್ಟು ಜರ್ಜರಿತವಾಗಿದ್ದ ಬಾಲಕೃಷ್ಣ ಪೂಜಾರಿ ಏಕಾಎಕಿ ಅನಾರೋಗ್ಯಕ್ಕೀಡಾಗಿದ್ದರು. ಕೈಕಾಲಿನ ಸ್ವಾಧೀನ ಕಳೆದುಕೊಂಡ ಅವರನ್ನು ಕಾರ್ಕಳ ಹಾಗೂ ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪ್ರತಿಮಾಳ ಅಣ್ಣ ಸಂದೀಪ್‌ ಅವರೇ ತನ್ನ ಭಾವನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಸಿದ್ದರು. ಉದರ ಸಂಬಂಧಿತ ಕಾಯಿಲೆಯಿಂದ ಗುಣಮುಖರಾದ ಬಾಲಕೃಷ್ಣ ಪೂಜಾರಿ ಅವರನ್ನು ಕಳೆದ ಅ.19ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿ ಅಜೆಕಾರಿಗೆ ಕರೆತರಲಾಗಿತ್ತು. ಆದರೆ ಕೈಕಾಲು ಬಲಹೀನವಾಗಿದ್ದರಿಂದ ಆಯುರ್ವೇದಿಕ್‌ ಚಿಕಿತ್ಸೆ ಪಡೆಯುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅ.19 ರ ಶನಿವಾರ ರಾತ್ರಿ ಬಾಲಕೃಷ್ಣ ಅವರನ್ನು ಮನೆಗೆ ಕರೆತಂದ ಬಳಿಕ ತಡರಾತ್ರಿ 12 ಗಂಟೆಯವರೆಗೂ ಸಂದೀಪ್ ತನ್ನ ಭಾವನ ಜತೆಗಿದ್ದು ತಾನೇ ಊಟ ಮಾಡಿಸಿದ್ದರು. ಬಳಿಕ ಬಾಲಕೃಷ್ಣ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಸಂದೀಪ್ ತನ್ನ ಮನೆಗೆ ತೆರಳಿದ್ದರು. ಇತ್ತ ಮನೆಯಲ್ಲಿ ಬಾಲಕೃಷ್ಣ ಹಾಗೂ ಅವರ ಪತ್ನಿ ಪ್ರತಿಮಾ ಇಬ್ಬರೇ ಇದ್ದರು. ಬೆಳಗಿನ ಜಾವ 3 ಗಂಟೆಗೆ ಬಾಲಕೃಷ್ಣ ಪೂಜಾರಿ ಮೃತಪಟ್ಟ ವಿಚಾರ ತನ್ನ ತಂಗಿ ಕರೆ ಮಾಡಿ ತಿಳಿಸಿದ್ದಳು ಎಂದು ಅಂದು ನಡೆದ ಘಟನೆ ಕುರಿತು ಸಂದೀಪ್‌ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!