ದ್ವಿತೀಯ ತ್ರೈಮಾಸಿಕ: ದೇಶದ ಜಿಡಿಪಿ ಶೇ.8.6 ಕುಸಿತ, ಮೊದಲ ಬಾರಿಗೆ ಭಾರತದಲ್ಲಿ ಸತತ ಆರ್ಥಿಕ ಹಿಂಜರಿತ!

ಮುಂಬೈ: ಕಳೆದ ಜುಲೈಯಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 8.6ರಷ್ಟು ಕುಸಿದಿದೆ. ಅಂದರೆ ಭಾರತದ ಆರ್ಥಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ವರ್ಷದ ಮೊದಲ ಮೊದಲಾರ್ಧದಲ್ಲಿ ಸತತ ಎರಡು ಬಾರಿ ತ್ರೈಮಾಸಿಕದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸತತ ಇಳಿಕೆ ಕಂಡುಬಂದಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.

ನಿನ್ನೆ ಆರ್ ಬಿಐಯ ತಿಂಗಳ ಆರ್ಥಿಕ ಬುಲೆಟಿನ್ ಬಿಡುಗಡೆಗೊಂಡಿದೆ. ಅದರಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಈ ಅಂಶ ಪತ್ತೆಯಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಅಂಕಿಅಂಶ ಇನ್ನೂ ಹೊರಬಂದಿಲ್ಲ.

ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಲಾಕ್ ಡೌನ್ ಹೇರಿಕೆಯಾಗಿ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಸಮಯದ ಜಿಡಿಪಿಗೆ ಹೋಲಿಸಿದರೆ ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿದಿತ್ತು. ಈ ವರ್ಷ ಇಡೀ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 9.5ರಷ್ಟು ಕುಸಿಯಬಹುದೆಂದು ಆರ್ ಬಿಐ ಅಂದಾಜಿಸಿದೆ.

ಆದರೆ ಕಳೆದೊಂದು ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಜಿಡಿಪಿ ಕೂಡ ನೆಗೆಯಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಜಿಡಿಪಿ ಅಂಕಿಅಂಶ ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ. 

ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, ಪ್ರಾಥಮಿಕ ಅಂದಾಜುಗಳು ಜೂನ್ ತ್ರೈಮಾಸಿಕದಲ್ಲಿ ಗೃಹ ಆರ್ಥಿಕ ಉಳಿತಾಯವನ್ನು ಜಿಡಿಪಿಯ ಶೇಕಡಾ 21.4 ಕ್ಕೆ ಏರಿಸಿದೆ ಎಂದು ತೋರಿಸಿದೆ, ಜೂನ್ 2019 ರ ತ್ರೈಮಾಸಿಕದಲ್ಲಿ 7.9 ಶೇಕಡಾ ಮತ್ತು ಮಾರ್ಚ್ 2020 ರ ತ್ರೈಮಾಸಿಕದಲ್ಲಿ ಶೇಕಡಾ 10ರಷ್ಟಿದೆ. 

Leave a Reply

Your email address will not be published. Required fields are marked *

error: Content is protected !!