ಆರೋಗ್ಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಯೋಗ ಒಂದೇ ಪರಿಹಾರ- ಬಾಬಾ ರಾಮ್ ದೇವ್
ಉಡುಪಿ: ಯೋಗದಿಂದ ಮಾತ್ರ ಶರೀರದಲ್ಲಿ ವ್ಯಯವಾದ ಶಕ್ತಿಯನ್ನು ಮತ್ತೆ ಉತ್ಪಾದಿಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ತಾಸು ಯೋಗ, ಪ್ರಾಣಾಯಾಮ ಮಾಡಬೇಕೆಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಇಂದು ರಾಜಾಂಗಣದಲ್ಲಿ ಪುತ್ತಿಗೆ ಮಠದ ಆಶ್ರಯದಲ್ಲಿ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ ಅಂಗವಾಗಿ ಮೂರು ದಿನ ನಡೆಯುವ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪತಂಜಲಿ ಯೋಗ ಪೀಠದ ಮೂಲಕ ಪ್ರತಿನಿತ್ಯ ದೇಶ ಮತ್ತು ಹೊರದೇಶಗಳಲ್ಲಿ 5 ಕೋಟಿ ಜನ ಯೋಗಾಭ್ಯಾಸ ಪ್ರಾಣಾಯಾಮ ನಡೆಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಮನುಷ್ಯನ ಆರೋಗ್ಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಭಾರತೀಯ ಯೋಗ ಒಂದೇ ಪರಿಹಾರ ಎಂಬುದು ಜಗತ್ತಿಗೆ ತಿಳಿದಿದೆ ಎಂದು ಹೇಳಿದರು.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮಾತನಾಡಿ, ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮ್ ದೇವ್ ಜೀ ಯವರು ವಿಶ್ವವ್ಯಾಪಕ ಗೊಳಿಸಿ ಜನರನ್ನು ಧರ್ಮಮಾರ್ಗದಲ್ಲಿ ಕರ್ತವ್ಯ ಭ್ರಷ್ಟರಾಗದಂತೆ ಜಾಗೃತಗೊಳಿಸುತ್ತಿದ್ದಾರೆ. ಗೀತೆಯನ್ನು ಬಿಟ್ಟು ಯೋಗ ಇಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡಕ್ಕೂ ಕೃಷ್ಣ ಗೀತೆಯಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಿದ್ದಾನೆ. ಈ ಕಾರ್ಯಕ್ರಮ ಗೀತಾ ಯೋಗ ಸಂಗಮ ಎಂದು ಬಣ್ಣಿಸಿದರು.
ಪೀಠದ ಯೋಗಾಧಿಕಾರಿ ಸ್ವಾಮೀ ಪರಮಾರ್ಥ ಜೀ , ರಾಜ್ಯ ಪ್ರಭಾರಿ ಭವರ್ ಲಾಲ್ ಆರ್ಯ, ಮಠದ ದಿವಾನರಾದ ನಾಗರಾಜಾಚಾರ್ಯ, ಪ್ರಸನ್ನಾಚಾರ್ಯ, ಜಿಲ್ಲಾ ಪ್ರಭಾರಿ ವೆಂಕಟೇಶ ಮೆಹಂದಳೆ , ರಾಘವೇಂದ್ರ ಭಟ್ ಮೊದಲಾದವರಿದ್ದರು.