ವಾಟ್ಸಾಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ- ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಮನ್ನಣೆ ಕೊಡದ ಪಕ್ಷದ ನಾಯಕ ಸಿ. ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿರುವ ಅವರು ಕೆಪಿಸಿಸಿ ಕಛೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ವಾಟ್ಸಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಮತ್ತು ಡಿ. ಕೆ ಸುರೇಶ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಭಾವುಟ ಹಾಕಿ ಪಕ್ಷಕ್ಕೆ ಬರ ಮಾಡಿಕೊಂಡರು. ಗುರುವಾರ ಅವರು ನಾಮಪತ್ರ ಸಲ್ಲಿಕೆ ಮಾಡಲು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ. ನಮ್ಮ ರಾಮನಗರ ಜಿಲ್ಲೆಯ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಯೋಗೇಶ್ವರ್ ಅವರು ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಮ್ಮ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ, ಈಗಾಗಲೇ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ. ಯೋಗೇಶ್ವರ್ ರಾಜಕಾರಣ ಆರಂಭಿಸಿದ್ದೆ ಕಾಂಗ್ರೆಸ್ ನಿಂದ, ಹೀಗಾಗಿ ಮರಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬಿಜೆಪಿ ನಾಯಕರ ಸಲಹೆ ಮೇರೆಗೆ NDA ಟಿಕೆಟ್​ ಸಿಗಬಹುದು ಎಂದು ಯೋಗೇಶ್ವರ್​ ನಿನ್ನೆಯವರೆಗೂ ಕಾದು ಕುಳಿತ್ತಿದ್ದರು. ಸಂಜೆ ವರೆಗೂ ಕಾಯುತ್ತೇನೆ ಎಂದು ಯೋಗೇಶ್ವರ್​ ಅವರು ಪ್ರಲ್ಹಾದ್ ಜೋಶಿ, ಸಂಸದ ಡಾ.‌ಸಿ.ಎನ್.ಮಂಜುನಾಥ್​​ ಅವರಿಗೆ ತಿಳಿಸಿ ಚನ್ನಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಆದರೆ, ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಕಾರಣ ಸಿಪಿ ಯೋಗೇಶ್ವರ್ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಇಬ್ಬರೂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆನಂತರ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ನಿನ್ನೆ ರಾತ್ರಿಯೇ ಸಿಎಂಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಅವರು ವಯನಾಡಿಗೆ ಹೋಗುವುದನ್ನು ಬಿಟ್ಟು ನೇರವಾಗಿ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!