ಕೇಂದ್ರ ಸರಕಾರಿ ಅಧಿಕಾರಿ ಹೆಸರಿನಲ್ಲಿ ಕೃಷ್ಣ ಮಠಕ್ಕೆ ವಂಚನೆ ಪ್ರಕರಣ: ಆರೋಪಿ ನ್ಯಾಯಾಲಯಕ್ಕೆ ಶರಣು

ಉಡುಪಿ, ಅ.20: ಪ್ರಧಾನ ಮಂತ್ರಿ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ನಂಬಿಸಿ ಕೃಷ್ಣ ಮಠದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ಆರೋಪಿಗೆ ಉಡುಪಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.

ಆರೋಪಿ ಉದಯ್ ಕುಮಾರ್ ಎಂಬಾತ ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ಶ್ರೀಕೃಷ್ಣಮಠದ ದಿವಾನ ನಾಗರಾಜ್ ಅವರಿಗೆ ಕರೆ ಮಾಡಿ, ತಾವು ಕುಟುಂಬ ಸಮೇತರಾಗಿ ಉಡುಪಿ ಕೃಷ್ಣಮಠದ ದರ್ಶನಕ್ಕೆ ಆಗಮಿಸುತ್ತಿದ್ದೇವೆ. ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕೋರಿಕೊಂಡಿದ್ದರು. ಅದರಂತೆ ಅ.10ರಂದು ಮಠದಲ್ಲಿ ಅವರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿ, ವಿಶೇಷ ದರ್ಶನ ಮಾಡಿಸಿದ್ದರು.

ನಂತರದಲ್ಲಿ ಆತನ ಚಲನವಲನದ ಮೇಲೆ ಸಂಶಯಗೊಂಡ ದಿವಾನರು ಪ್ರಧಾನ ಮಂತ್ರಿ ಕಾರ್ಯಾಲಯದ ವೆಬ್ ಸೈಟ್ ಪರಿಶೀಲಿಸಿದಾಗ ಆತ ಸುಳ್ಳು ಮಾಹಿತಿ ನೀಡಿದ್ದಾಗಿ ತಿಳಿದು, ಸರಕಾರಿ ಅಧಿಕಾರಿ ಎಂಬ ಸೋಗಿನಲ್ಲಿ ಕೃಷ್ಣಮಠಕ್ಕೇ ಬಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿ ಉದಯ್ ಕುಮಾರ್ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯವು ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ವಾದಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!