ಭಾಷಣ ಕಲೆಯೂ ಸಂಪರ್ಕಕ್ಕಾಗಿರುವ ಮಾಧ್ಯಮ- ವಂ. ಸ್ಟೀವನ್ ಫೆರ್ನಾಂಡಿಸ್

ಉಡುಪಿ: ವ್ಯಕ್ತಿ ಇನ್ನೋರ್ವ  ವ್ಯಕ್ತಿಯೊಡನೆ ಮಾತನಾಡಿದಾಗ ಸಂಭಾಷಣೆ ಆರಂಭವಾದರೆ ಅದೇ ವ್ಯಕ್ತಿ ಸಮೂಹದೊಂದಿಗೆ ಮಾತನಾಡಿದಾಗ ಭಾಷಣದ ಆರಂಭವಾಗುತ್ತದೆ. ಭಾಷಣ ಕೂಡ ಸಂಪರ್ಕಕ್ಕಾಗಿ ಇರುವ ಮಾಧ್ಯಮ ಎಂದು ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕಥೊಲಿಕ ಯುವ ಸಂಚಾಲನದ ನಿರ್ದೇಶಕ ವಂ|ಸ್ಟೀವನ್ ಫೆರ್ನಾಂಡಿಸ್ ಅಭಿಪ್ರಾಯ ಪಟ್ಟರು.

ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೆಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾಷಣವೆಂದರೆ ಕೇವಲ ಬರೀ ಮಾತುಗಳಾಗದೆ ನಮ್ಮ ನೈಜ ಭಾವನೆಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಪಡಿಸುವ ಮಾಧ್ಯವಾಗಿದೆ. ಒಬ್ಬ ವ್ಯಕ್ತಿಯು ಸಮೂಹದ ಮುಂದೆ ತಾನು ವ್ಯಕ್ತಪಡಿಸುವ ಮಾತು ಯಾವ ರೀತಿಯಲ್ಲಿ ಇರಬೇಕು ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ನಾವು ಆಡಿದ ಮಾತು ಇನ್ನೊಬ್ಬ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಇರಬೇಕು. ಇಂತಹ ತರಬೇತಿ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿಯಾಗಿ ಭಾಷಣ ಮಾಡುವ ಕಲೆಯ ಕೌಶಲ್ಯವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.

ಜೆಸಿಐ ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪರಿಣಾಮಕಾರಿ ಭಾಷಣ ಕಲೆ ಹಾಗೂ ವೈಯುಕ್ತಿಕ ಬೆಳವಣಿಗೆ ಕುರಿತು ವಿದ್ಯಾರ್ಥಿಗಳಿಗೆ ತನ್ನ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ಕಥೊಲಿಕ್ ಸಭಾ ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!