ಸಿಎಂ ಸಿದ್ದರಾಮಯ್ಯ, ಖರ್ಗೆ ಸೈಟ್ ವಾಪಸ್ ನೀಡಿದಂತೆ ಬಿಜೆಪಿಯವರೂ ಫಾಲೋ ಮಾಡಲಿ- ಐವನ್ ಡಿಸೋಜ
ಉಡುಪಿ: ಅ.21ರಂದು ಕರ್ನಾಟಕ ವಿಧಾನಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ನಿಶ್ಚಿತವಾಗಿದೆ. ಮತದಾರರು ಪಕ್ಷಾತೀತವಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ವಿಧಾನಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಐವನ್ ಡಿಸೋಜ ಹೇಳಿದ್ದಾರೆ.
ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿಗೆ ಯಾವುದೇ ಅನುಭವ ಅಲ್ಲ. ಅನುದಾನ ತರುವ, ಕೆಲಸ ಮಾಡುವ ಚಾಕಚಕ್ಯತೆ ನಮ್ಮ ಅಭ್ಯರ್ಥಿಗೆ ಇದೆ. ಕ್ಷೇತ್ರಕ್ಕೆ ನ್ಯಾಯ ಕೊಡುವ ಶಕ್ತಿ ರಾಜು ಪೂಜಾರಿಗೆ ಇದೆ ಎಂದು ಅವರು ತಿಳಿಸಿದರು.
ರಾಜು ಪೂಜಾರಿ ಅವರಿಗೆ ಸ್ಥಳೀಯ ಆಡಳಿತ ಬಗ್ಗೆ ಅಪಾರ ಅನುಭವವಿದೆ. ಅವರು ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿ ಅಧ್ಯಕ್ಷರಾಗಿ ಅನುಭವಗಳಿಸಿದ್ದಾರೆ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಅರಿವಿದೆ. ಕ್ಷೇತ್ರದಲ್ಲಿ ಹೆಚ್ಚು ದುಡಿಮೆ ಮಾಡಿದ ಅನುಭವಿ ಗೆಲ್ಲಬೇಕು ಎಂದ ಐವನ್ ಡಿಸೋಜ, ಬಿಜೆಪಿಗೆ ಅತಿಯಾದ ಆತ್ಮವಿಶ್ವಾಸ ಮತ್ತು ಮಾಹಿತಿ ಕೊರತೆ ಇದೆ ಎಂದರು.
ಸಿದ್ಧರಾಮಯ್ಯ ಸರಕಾರದ ಐದು ಗ್ಯಾರಂಟಿ ಪ್ರತೀ ಮತದಾರರಿಗೆ ತಲುಪಿದೆ. ಚುನಾವಣೆಯಲ್ಲಿ ಬಿಜೆಪಿಗೆ ಜನರು ಸರಿಯಾದ ಉತ್ತರ ಕೊಡುತ್ತಾರೆ ಎಂದ ಅವರು, ಗ್ರಾಮಕ್ಕೆ, ಪ್ರತಿನಿಧಿಗಳಿಗೆ ರಾಜ್ಯ ಬಿಜೆಪಿಯ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಡವರಿಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಬಗ್ಗೆ ಬಿಜೆಪಿಗೆ ಅಸೂಯೆ ಇದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮೋಸದಿಂದ ಆರ್ಥಿಕ ಸಬಲರಿಗೂ ಮೋಸದಿಂದ ನೀಡಿದ ಬಿಪಿಎಲ್ ಕಾರ್ಡ್ ಬಗ್ಗೆ ರಾಜ್ಯಾದ್ಯಂತ ಸರ್ವೇ ನಡೆಯುತ್ತಿದೆ. ರಾಜಕೀಯ ಕಾರಣಕ್ಕೆ ಸುಳ್ಳು, ದ್ವೇಷದ ರಾಜಕಾರಣ ಮಾಡಬೇಡಿ ಎಂದು ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಮಾಡಿದರು.
ಈಡಿ ದಾಳಿ ರಾಜಕೀಯ ಪ್ರೇರಿತ: ಜಾರಿ ನಿರ್ದೇಶನಾಲಯ ತಮ್ಮ ಇತಿಮಿತಿಗಳನ್ನು ಮೀರಿ ದಾಳಿ ನಡೆಸುತ್ತಿದೆ. ಈಡಿ ಅಧಿಕಾರಿಗಳಲ್ಲಿ ಅತ್ಯುತ್ಸಾಹ ಕಾಣುತ್ತಿದೆ. ಆದರೆ ಇದು ದ್ವೇಷದ ಕ್ರಮ ಹಾಗೂ ರಾಜಕೀಯ ಪ್ರೇರಿತ ಎಂದವರು ಆರೋಪಿಸಿದರು.
ಮುಡಾ ಪ್ರಕರಣದ ಕುರಿತು ನ್ಯಾಯಾಲಯದ ಆದೇಶದಂತೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಾಗಾದರೆ ಈಡಿಗೆ ಅಲ್ಲಿ ಏನು ಕೆಲಸ? ಎಂದು ಪ್ರಶ್ನಿಸಿದ ಐವನ್, ಈಡಿ ತಮ್ಮ ಕಾನೂನು ಪರಿಮಿತಿಯನ್ನು ಮೀರಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ರಾಜ್ಯ ಸರಕಾರದ ಹೆಸರು ಕೆಡಿಸಲು ಬಿಜೆಪಿ ಪ್ರೇರಣೆಯಿಂದ ಅದು ಈ ರೀತಿ ಮಾಡುತ್ತಿದೆ ಎಂದರು.
ಮೂಡಾ ಹಗರಣದ ಫೈಲ್‌ಗಳನ್ನು ಬೈರತಿ ಸುರೇಶ್ ಸುಟ್ಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪದ ಕುರಿತು ಪ್ರಶ್ನಿಸಿದಾಗ ಇದು ಕುಣಿಯಲು ಬಾರದವರು ಅಂಗಳ ಸರಿಯಿಲ್ಲ ಎಂದಂತೆ. ಶೋಭಾ ಕರಂದ್ಲಾಜೆಗೆ ಮಾಹಿತಿಯ ಕೊರತೆ ಇದೆ. ನೀವು ಯಾಕೆ ಹಿಟ್&ರನ್ ಮಾಡುತ್ತೀರಿ. ಎಲ್ಲಾ ವಿಚಾರಗಳಿಗೂ ನಮ್ಮಲ್ಲಿ ದಾಖಲೆಗಳು ಇವೆ. ಮೂರು- ನಾಲ್ಕು ಏಜೆನ್ಸಿಗಳಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಿದೆ. ದಾಖಲೆ ಸಾಗಿಸಿದ್ದಾರೆ ಅನ್ನೋದೇ ಸುಳ್ಳು. ಯಾವುದಾದರೂ ಒಂದು ಸಾಕ್ಷಿ ತೋರಿಸಲಿ ಎಂದು ಭೈರತಿ ಹೇಳಿದ್ದಾರೆ. ನಾನು ಪ್ರಮಾಣ ಮಾಡಲು ತಯಾರಿದ್ದೇನೆ ಎಂದೂ ಭೈರತಿ ಹೇಳಿದ್ದಾರೆ. ತಾಕತ್ತಿದ್ದರೆ ಶೋಭಾ ಆ ಸವಾಲಿಗೆ ಉತ್ತರಿಸಲಿ ಎಂದು ಐವನ್ ಸವಾಲು ಹಾಕಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರನ ಟಿಕೆಟ್ ಅಕ್ರಮದ ಕುರಿತು ಮಾತನಾಡಿದ ಅವರು, ಇದರ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನನಗೆ ಸಹೋದರ ಗೊತ್ತೇ ಇಲ್ಲ 30 ವರ್ಷದಿಂದ ಪರಿಚಯ ಇಲ್ಲ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿಯವರ ಈ ಎಲ್ಲ ವಿಚಾರ ನಮಗೆ ಈಗ ಗೊತ್ತಾಗಿದೆ. ಸಹೋದರ ಸಹೋದರಿಯರನ್ನು 30 ವರ್ಷ ನೋಡುವುದಿಲ್ಲ ಎಂದು ಈಗ ಗೊತ್ತಾಗಿದ್ದು. ಈ ಬಗ್ಗೆ ಶೋಭಾ ಕೆರಂದ್ಲಾಜೆ ತನಿಖೆ ನಡೆಸಲಿ,ಉತ್ತರ ಕೊಡಲಿ ಎಂದರು.
ಖರ್ಗೆ ಸೈಟ್ ವಾಪಸ್ ನೀಡಿದ ಮಾದರಿಯನ್ನು ಬಿಜೆಪಿ ಫಾಲೋ ಮಾಡಲಿ. ಸಿದ್ದರಾಮಯ್ಯ ಹ್ಯೂಬ್ಲೆಟ್ ವಾಚ್ ಬಗ್ಗೆ ಆರೋಪ ಬಂದಾಗ ಕ್ಯಾಬಿನೆಟ್‌ನಲ್ಲಿ ಇಟ್ರು. ಸೈಟ್ ಬಗ್ಗೆ ಆರೋಪ ಪತ್ನಿ ಸೈಟ್ ವಾಪಸ್ ಕೊಟ್ಟಾಗ ಗಂಡನಾಗಿ ಅದನ್ನು ಸ್ವಾಗತ ಮಾಡಿದರು. ದುಡ್ಡು ಕೊಟ್ಟು ನಿಯಮ ಪ್ರಕಾರ ಸೈಟ್ ತೆಗೆದು ಕೊಂಡರೂ ಖರ್ಗೆಯವರು ವಾಪಾಸ್ ಕೊಟ್ಟರು ಎಂದರು.
ಬಿಜೆಪಿ ನಾಯಕ ಆರ್.ಅಶೋಕ ಕೂಡ ಸೈಟ್ ಹಿಂದೆ ಕೊಟ್ಟಿದ್ದಾರೆ. ನ್ಯಾಯಾಲಯ ಆಮೇಲೆ ಏನು ತೀರ್ಮಾನ ಕೊಟ್ಟಿತು?. ಕೇಸ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಆಗ ನ್ಯಾಯಾಲಯ ಹೇಳಿತ್ತು. ನ್ಯಾಯ ಎಲ್ಲರಿಗೂ ಒಂದೇ ಅಲ್ವಾ. ಹಾಗಾದರೆ ಈಡಿಯವರು ರೇಡ್ ಮಾಡೋದು ಯಾಕೆ. ಸಿದ್ದರಾಮಯ್ಯರಿಗೆ ಇದೆಲ್ಲ ತಾಗೋದೇ ಇಲ್ಲ ಬಿಡಿ. ಅವರ ಹಿಂದೆ ಹಿಂದೆ 136 ಶಾಸಕರಿದ್ದಾರೆ ಎಂದು ಐವನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಜಿಲ್ಲಾ ನಾಯಕರಾದ ಎಂ.ಎ.ಗಫೂರ, ಮುನಿಯಾಲು ಉದಯಕುಮಾರ್, ಕಿಶನ್ ಹೆಗಡೆ ಕೊಳ್ಕೆಬೈಲು, ಭಾಸ್ಕರ ರಾವ್ ಕಿದಿಯೂರು, ಡಾ.ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.