ಸಿದ್ದರಾಮಯ್ಯ ರಕ್ಷಿಸಲು ಸಚಿವ ಬೈರತಿ ಸುರೇಶ್ ಮುಡಾ ಕಡತ ಸುಟ್ಟು ಹಾಕಿದ್ದಾರೆ: ಶೋಭಾ ಕರಂದ್ಲಾಜೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸುಟ್ಟು ಹಾಕಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮೈಸೂರಿಗೆ ಹೋಗಿದ್ದರು. 1997ರ ನಂತರದ ಎಲ್ಲಾ ಕಡತಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಆ ಕಡತಗಳು ಎಲ್ಲಿ ಹೋದವು? ನಿಮ್ಮ ರಕ್ಷಣೆಗಾಗಿ ಮುಡಾದ ಎಲ್ಲಾ ಕಡತಗಳು ಸಚಿವ ಸುರೇಶ್ ಒಯ್ದು ಸುಟ್ಟು ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಕೇವಲ ಸಿದ್ದರಾಮಯ್ಯನವರ ಬಾಮೈದ ಹಾಗೂ ಜಮೀನು ಮಾಲೀಕ ಹಾಗೂ ನಾಲ್ಕನೇ ಆರೋಪಿ ಜೆ. ದೇವರಾಜು ವಿರುದ್ಧ ತನಿಖೆ ನಡೆಸುವುದಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಸಚಿವೆ ಒತ್ತಾಯಿಸಿದರು.
ಮುಡಾ ಹಗರಣ ಕುರಿತಂತೆ ರಾಜ್ಯಪಾಲರು 17ಎ ಅಡಿಯಲ್ಲಿ ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಇದನ್ನು ಪ್ರಶ್ನಿಸಿ ನೀವು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ವಿಶೇಷ ನ್ಯಾಯಾಲಯ ಸಹ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಲೋಕಾಯುಕ್ತ ಸಹ ತನಿಖೆ ಆರಂಭಿಸಿದೆ. ಇದರ ನಡುವೆ ಮುಡಾ ಅಧ್ಯಕ್ಷ ಕೆ.ಮರೀಗೌಡ ರಾಜೀನಾಮೆ ನೀಡಿದ್ದು ಸಾಕಾಗುವುದಿಲ್ಲ ನೈತಿಕ ಹೊಣೆಹೊತ್ತು ನೀಡು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ, ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ, ತಮ್ಮ ಕುಟುಂಬಕ್ಕೆ ಅನುಕೂಲ ಮಾಡಿಕೊಡಲು ಕಾನೂನನ್ನು ಬದಲಿಸಿದ್ದಾರೆ ಎಂದು ಹೇಳಿದೆ. ಮೊದಲನೆಯದಾಗಿ ನೀವು ತೆಗೆದುಕೊಂಡಿರುವ ಜಮೀನು ಅಕ್ರಮವಾಗಿದೆ. ಮೂಲತಃ ಈ ಜಮೀನು ಪರಿಶಿಷ್ಟ ಜಾತಿಯ ವ್ಯಕ್ತಿಗೆ ಸೇರಿದ್ದು, ಜಮೀನು ಮಾಲೀಕ ಎಂದು ಹೇಳಿಕೊಂಡಿದ್ದ ದೇವರಾಜು ಎಂಬುವರಿಗೆ ಸೇರಿದ್ದಲ್ಲ. ನಿಮಗೆ ಜಮೀನು ಹೇಗೆ ಸಿಕ್ಕಿತು? ನಿಮ್ಮ ಬಾಮೈದಗೆ ಈ ಭೂಮಿ ನಿಮಗೆ ಹೇಗೆ ಕೊಟ್ಟರು? ಎಂದು ಪ್ರಶ್ನಿಸಿದರು.
ಹಗರಣ ನಡೆದಾಗ ಸಿಎಂ ಸಿದ್ದರಾಮಯ್ಯ ಅವರೇ ನೀವು, ಒಂದಲ್ಲ ಒಂದು ಸಾಂವಿಧಾನಿಕ ಸ್ಥಾನದಲ್ಲಿ ಇದ್ದೀರಿ, ನೀವು ಪ್ರಧಾನ ಪ್ರದೇಶದಲ್ಲಿ ನಿವೇಶನಗಳನ್ನು ಮಂಜೂರು ಮಾಡಿ ಅವುಗಳನ್ನು ಹಿಂದಿರುಗಿಸಿದ್ದೀರಿ, ಸೈಟ್‌ಗಳನ್ನು ಹಿಂದಿರುಗಿಸುವುದೇ ಅಪರಾಧಕ್ಕೆ ಸಾಕ್ಷಿಯಾಗಿದೆ ಎಂದು ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರ ರಾಜೀನಾಮೆಯನ್ನು ಏಕೆ ಅಂಗೀಕರಿಸಿದ್ದೀರಿ ಎಂದು ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ಗೌಡರು ನಿಮ್ಮ ನಿಕಟವರ್ತಿಯಾಗಿದ್ದರು. ಹಗರಣದ ಹೊಣೆಗಾರಿಕೆ ಅವರ ಮೇಲೆ ಹೊರಿಸಲು ನೀವು ಯೋಜಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ