ಬೈಲೂರು ಮಹಿಷಮರ್ದಿನಿ ದೇವಸ್ಥಾನ: ಡಿ.9-15 ಶತಚಂಡಿಕಾ ಯಾಗ, ಬ್ರಹ್ಮಮಂಡಲ ಸೇವೆ

ಉಡುಪಿ: ಇತಿಹಾಸ ಪ್ರಸಿದ್ಧ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.9ರಿಂದ 15ರ ವರೆಗೆ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ ನಡೆಯಲಿದೆ ಎಂದು ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಲ್ಲಿ ಊರ-ಪರವೂರ ಭಕ್ತಾದಿಗಳ ಸಹಕಾರದಿಂದ ಶ್ರೀದೇವಳದ ಜೀರ್ಣೋದ್ಧಾರ ಹಾಗೂ ಸುತ್ತುಪೌಳಿಯ ನವೀಕರಣ ಸಂದರ್ಭದಲ್ಲಿ ನಾಗದೇವರ ನುಡಿ ಹಾಗೂ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತವಾದಂತೆ ದೇವಿ ಪ್ರೀತ್ಯರ್ಥವಾಗಿ ಶತಚಂಡಿಕಾ ಯಾಗ ಹಾಗೂ ನಾಗ ಬ್ರಹ್ಮ ನಂದಿ ರಕ್ತೇಶ್ವರಿ ಮತ್ತು ಕ್ಷೇತ್ರಪಾಲ ಪ್ರೀತ್ಯರ್ಥವಾಗಿ ಬ್ರಹ್ಮಮಂಡಲ ಸೇವೆ ನಡೆಸಲಾಗುತ್ತದೆ.

ಸುಮಾರು 50 ಲಕ್ಷ ರೂ. ವೆಚ್ಚವಾಗಲಿದೆ. ಸುಮಾರು 25 ಸಾವಿರ ಮಂದಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಕ್ಷೇತ್ರದ ತಂತ್ರಿ ಕೃಷ್ಣಮೂರ್ತಿ ತಂತ್ರಿ ಮಾತನಾಡಿ, ಏಕಕುಂಡದಲ್ಲಿ ಪ್ರತಿದಿನ 10 ಮಂದಿ ದಶಾವರ್ತಿ ಆಹುತಿ ನೀಡಲಿದ್ದು, ಯಾಗ ಪೂರ್ವಾಂಗವಾಗಿ ಶುದ್ಧಿಹೋಮಗಳು, ರಾಕ್ಷೋಘ್ನಹೋಮ, ಗಣಹೋಮ ಇತ್ಯಾದಿ ಹೋಮಗಳು, ಸಪ್ತಶತೀ ಪಾರಾಯಣ, ಆಶ್ಲೇಷಾಬಲಿ ನಡೆಯಲಿದೆ. 140 ಕೆಜಿ ಅಕ್ಕಿಯ ಪರಮಾನ್ನ ಆಹುತಿಗೆ ಬಳಸಲಾಗುವುದು. 100 ಮಂದಿ ಸುವಾಸಿನಿಯರು ಮತ್ತು 100 ಮಂದಿ ಕುಮಾರಿಕಾ ಪೂಜನ, ಡಿ.14ರಂದು ಸಹಸ್ರ ಮಹಿಳೆಯರಿಂದ ದುರ್ಗಾರತಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಮುದ್ದಣ್ಣ ಶೆಟ್ಟಿ, ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ರಮೇಶ ಶೆಟ್ಟಿ ಕಳತ್ತೂರು, ಸುದರ್ಶನ ಸೇರಿಗಾರ್, ಕಾರ್ಯದರ್ಶಿ ನಾರಾಯಣದಾಸ ಉಡುಪ ಇದ್ದರು.

Leave a Reply

Your email address will not be published. Required fields are marked *

error: Content is protected !!