ಉಡುಪಿ: ವಿಚಾರಣಾಧೀನ ಕೈದಿ ಸಾವು
ಹಿರಿಯಡ್ಕ: ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವಮೊಗ್ಗ ಮೂಲದ ವಿಚಾರಣಾಧೀನ ಕೈದಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಶಿವಮೊಗ್ಗ ಟಿಪ್ಪು ನಗರ ನಿವಾಸಿ ಸೈಯದ್ ಮೆಹಬೂಬ್ ಪಾಷಾ (58) ಮೃತ ಕೈದಿ. ಜೂನ್ 2019 ರಿಂದ ಬಂಧನದಲ್ಲಿದ್ದ ಅವರು ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ, ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಬಾರಿ ಚಿಕಿತ್ಸೆ ನೀಡಲಾಗಿತ್ತು.
ಮಂಗಳವಾರ ಬೆಳಗಿನ ಜಾವ 12.45ಕ್ಕೆ ತೀವ್ರ ಅಸ್ವಸ್ಥಗೊಂಡ ಇವರನ್ನು ಜೈಲರ್ ಹಾಗೂ ಕಾರಾಗೃಹ ಸಿಬ್ಬಂದಿ ಬೆಂಗಾವಲಿನಲ್ಲಿ ಅಂಬ್ಯುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪರೀಕ್ಷಿಸಿದ ವೈದ್ಯರು ಕೈದಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ಲಿಖಿತ ಮಾಹಿತಿ ನೀಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.