ಎಂಆರ್‌ಪಿಎಲ್ 266 ನೇ ಸಾಮಾನ್ಯ ಸಭೆ: ಗಣನೀಯ ಆದಾಯ ದಾಖಲೆ
ಸುರತ್ಕಲ್: ಕೇಂದ್ರ ಸರ್ಕಾರದ ಒಎನ್‌ಜಿಸಿ ಸ್ವಾಮ್ಯದ ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ದ್ವಿತೀಯ ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಅವಧಿಯಲ್ಲಿ ಕಳೆದ ಸಾಲಿಗಿಂತ ಗಣನೀಯ ಆದಾಯ ದಾಖಲಿಸಿದೆ.
ಎಂಆರ್‌ಪಿಎಲ್‌ನ 266ನೇ ಸಾಮಾನ್ಯ ಸಭೆ ಶುಕ್ರವಾರ ಕಂಪನಿಯ ಕಚೇರಿಯಲ್ಲಿ ನಡೆಯಿತು. ಈ ವೇಳೆ 2ನೇ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಲೆಕ್ಕಾಚಾರವನ್ನು ಮಂಡಿಸಲಾಯಿತು. ಈ ತ್ರೈಮಾಸಿಕ ಸಾಲಿನಲ್ಲಿ ಕಚ್ಚಾತೈಲ ಸಂಸ್ಕರಣೆಯಿಂದ 28,786 ಕೋಟಿ ರು. ಆದಾಯ ಲಭಿಸಿದ್ದು, ಕಳೆದ ಬಾರಿ 22,844 ಕೋಟಿ ರು. ಆಗಿತ್ತು. ಅರ್ಧ ವಾರ್ಷಿಕ ಅವಧಿಯಲ್ಲಿ ಈ ಬಾರಿ 56,075 ಕೋಟಿ ರು. ಆದಾಯ ಪಡೆದರೆ, ಕಳೆದ ಬಾರಿ 47,669 ಕೋಟಿ ರು. ಆಗಿತ್ತು. ಈ ತ್ರೈಮಾಸಿಕದಲ್ಲಿ 9,410 ಕೋಟಿ ರು.ಗಳ ತೈಲ ರಫ್ತು ಮಾಡಿದ್ದು, ಕಳೆದ ಅವಧಿಯಲ್ಲಿ
6,974 ಕೋಟಿ ರು. ಆಗಿತ್ತು. ಈ ಅರ್ಧ ವಾರ್ಷಿಕದಲ್ಲಿ 16,974 ಕೋಟಿ ರು. ತೈಲ ರಫ್ತು ಆಗಿದ್ದರೆ, ಕಳೆದ ಅವಧಿಯಲ್ಲಿ ಇದು 13,198 ಕೋಟಿ ರು. ಆಗಿತ್ತು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 1,606 ಕೋಟಿ ರು. ಆಗಿದ್ದರೆ, ಈ ಬಾರಿ ನಷ್ಟಕ್ಕಿಂತ ಮೊದಲಿನ ತೆರಿಗೆ 1,041 ಕೋಟಿ ರು.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 1,059 ಕೋಟಿ ರು. ಆಗಿದ್ದು, ಈ ಬಾರಿ 682 ಕೋಟಿ ರು.ಗೆ ಇಳಿಕೆಯಾಗಿದೆ. ಅರ್ಧ ವಾರ್ಷಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 3,164 ಕೋಟಿ ರು. ಆಗಿದ್ದು, ಈ ಬಾರಿ 940 ಕೋಟಿ ರು.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 2,072 ಕೋಟಿ ರು. ಆಗಿದ್ದು, ಈ ಬಾರಿ 617 ಕೋಟಿ ರು.ಗೆ ಇಳಿದಿದೆ.
ಆಗಸ್ಟ್ 24ರಂದು ದೇವನಗೊಂಥಿ ಮಾರ್ಕೆಟಿಂಗ್ ಟರ್ಮಿನಲ್ ಕಾರ್ಯಾರಂಭಿಸಿದ್ದು, ತೈಲ ಟ್ಯಾಂಕರ್ ಗಳಿಗೆ ತೈಲ ತುಂಬಿಸಿಕೊಂಡು ತೆರಳುತ್ತಿವೆ. ಆಲ್ತೂರು ಘಟಕ ಪ್ರತಿ ತಿಂಗಳು 15 ಕೆಟಿಎಲ್ ತೈಲ ಉತ್ಪನ್ನವನ್ನು ಪರಿಪೂರ್ಣವಾಗಿ ಪೂರೈಸುತ್ತಿದೆ. 2ನೇ ಅವಧಿಯಲ್ಲಿ ಕಚ್ಚಾ ತೈಲವನ್ನು ಗರಿಷ್ಠ ಮಟ್ಟದಲ್ಲಿ ಸಂಸ್ಕರಿಸಲಾಗಿದೆ. ಘಟಕದ ಸಾಮರ್ಥ್ಯವನ್ನು ಶೇ.118.3ರಷ್ಟು ಬಳಸಿಕೊಳ್ಳಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.117.6ರಷ್ಟು ಸಾಮರ್ಥ್ಯ ಬಳಸಲಾಗಿತ್ತು. ಎಂಆರ್‌ಪಿಎಲ್ ಸಾಧನೆಗೆ ವಿವಿಧ
ಪ್ರಶಸ್ತಿಗಳು ಲಭಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.