ಮೈಸೂರು: ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ- ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ಸೈಟು ಹಂಚಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಶುಕ್ರವಾರ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದ್ದ ಲೋಕಾಯುಕ್ತ ಎಫ್‌ಐಆರ್ ಅನ್ನು ಆಧರಿಸಿ ಇತ್ತೀಚಿಗೆ ECIR ದಾಖಲಿಸಿದ್ದ ಇಡಿ ಅಧಿಕಾರಿಗಳು ಇಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಮುಡಾ ಕಚೇರಿಯಲ್ಲಿ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಕೆಂಗೇರಿ ನಿವಾಸದ ಮೇಲೂ ಇಡಿ ಅಧಿಕಾರಿಗಳು ನಡೆಸಿದ್ದಾರೆ.
ECIR ಪೊಲೀಸ್ ಎಫ್‌ಐಆರ್‌ಗೆ ಸಮಾನವಾಗಿದೆ. ಇಡಿ ದಾಖಲಿಸಿರುವ ಇಸಿಐಆರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1(ಎ1 ಆರೋಪಿ) ಆಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‌ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇಡಿ PMLA ಕಾಯ್ದೆಯಡಿ ECIR ದಾಖಲಿಸಿದ್ದು, ಇದು ಇತರ ಕೆಲವು ಬಲವಂತದ ಕ್ರಮಗಳ ಜೊತೆಗೆ ಸಿಎಂ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿ ಇದೆ.