ನನ್ನ ಹೆಸರನ್ನು ಪದೇ ಪದೆ ಹೇಳಿದರೇ, ಹರಿಕೃಷ್ಣ ಬಂಟ್ವಾಳ್ ಗೆ 2 ಬಿಸ್ಕಿಟ್ ಜಾಸ್ತಿ ಸಿಗುತ್ತದೆ: ರಮಾನಾಥ ರೈ
ಬಂಟ್ವಾಳ (ಉಡುಪಿ ಟೈಮ್ಸ್ ವರದಿ) : ನಾನು ಜನರಿಂದ ಚುನಾಯಿತನಾದವನು. ಪಕ್ಷದ ಎಲ್ಲ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸಿದ್ದೇನೆ. ಧರ್ಮಸ್ಥಳ ಹೆಗಡೆಯವರ ಹೆಸರು ಹೇಳಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರಿಗೆ ಯಾವ ರೀತಿಯ ಅಪಾಯವನ್ನು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ತಂದಿತ್ತರೊ, ಅದೇ ಅಪಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯಕ್ ರವರಿಗೆ ತರುತ್ತಾರೆಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಎಸ್ ಡಿಪಿಐ ಜತೆಗೆ, ರಮಾನಾಥ ರೈ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಇತ್ತೀಚೆಗೆ ಆರೋಪಿಸಿದ್ದರು. ಇಂದು ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ರಮಾನಾಥ ರೈ, ಹರಿಕೃಷ್ಣ ಬಂಟ್ವಾಳ್ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಜೆಡಿಎಸ್, ಎಸ್ ಡಿಪಿಐ ಹಲವು ಕಡೆ ಅಧಿಕಾರ ಹಂಚಿಕೊಂಡಿವೆ. ಆದ್ರೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹರಿಕೃಷ್ಣ ಬಂಟ್ವಾಳ್ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಪದೇಪದೆ ನನ್ನ ಹೆಸರನ್ನು ಅನವಶ್ಯಕವಾಗಿ ಎಳೆತಂದು, ರಾಜಕೀಯವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ನಾನು ರಾಜಕೀಯವಾಗಿ ಯಾರ ಹೆಸರನ್ನು ಎಳೆದು ತಂದಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಯಾವ ಪಕ್ಷದೊಂದಿಗೂ ಸಂಬಂಧ ಇಲ್ಲ. ನಳಿನ್ ಕುಮಾರ್ ಕಟೀಲ್ ನಮ್ಮ ಸಮಾಜದವರು ಇರಬಹುದು. ಆದರೆ ರಾಜಕೀಯವಾಗಿ ನಾವು ಎದುರಾಳಿಗಳೇ. ಜನಾರ್ದನ ಪೂಜಾರಿಯವರನ್ನು ಸೋಲಿಸಿದ ನಳಿನ್ ಜೊತೆ ಹರಿಕೃಷ್ಣ ಬಂಟ್ವಾಳ್ ಸೇರಿಕೊಂಡಿದ್ದಾರೆ. ಆದರೆ ನಾನು ಸೇರಿಲ್ಲ. ಪ್ರತಿ ಚುನಾವಣೆಯಲ್ಲಿ ಹರಿಕೃಷ್ಣ ಬಂಟ್ವಾಳ್ ನನಗೆ ವಂಚನೆ ಮಾಡಿದ್ದಾರೆ. ನನ್ನ ಯೋಗ್ಯತೆಗೆ ಮತ್ತು ಅವರ ಯೋಗ್ಯತೆಗೆ ತುಂಬ ವ್ಯತ್ಯಾಸ ಇದೆ. ಸೋತರೂ ಗೆದ್ದರೂ ನನ್ನ ಪಕ್ಷ ನನಗೆ ದೊಡ್ಡದು. ಕಾಂಗ್ರೆಸ್ ನನ್ನ ಧರ್ಮ. ನನ್ನ ಹೆಸರನ್ನು ಪದೇ ಪದೆ ಹೇಳಿದರೇ, ಹರಿಕೃಷ್ಣ ಬಂಟ್ವಾಳ್ ಗೆ 2 ಬಿಸ್ಕಿಟ್ ಜಾಸ್ತಿ ಸಿಗುತ್ತದೆ. ತಾಲ್ಲೂಕು ಪಂಚಾಯತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಇದೆ. ಉಭಯ ಜಿಲ್ಲೆಗಳಲ್ಲಿ ಗರಿಷ್ಠ ಸೀಟು ದೊರಕಿದ ಕೀರ್ತಿ ನಮ್ಮ ತಾಲ್ಲೂಕ್ ಪಂಚಾಯತ್ ಗೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ ಇದು ನನಗೆ ನೆಮ್ಮದಿ ತಂದಿದೆ ಎಂದರು.
ಹರಿಕೃಷ್ಣ ಬಂಟ್ವಾಳ್ ಅವರ ಅಹಂಕಾರ ಮಿತಿ ಮೀರಿದೆ. ಇದಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಲವು ವರ್ಷಗಳ ಹಿಂದೆ ಬಿಜೆಪಿಯಲ್ಲಿದ್ದ ಹರಿಕೃಷ್ಣ ಬಂಟ್ವಾಳ್ ರನ್ನು, ಪಕ್ಷದಿಂದ ಹೊರ ಹಾಕಿತ್ತು. ಬಳಿಕ ಕನ್ನಡನಾಡು ಪಕ್ಷವನ್ನು ಸೇರಿದ ಇವರು ಅಲ್ಲಿಯೂ ನಿಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕೆಲವು ಸಮಯಗಳ ಹಿಂದೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಇವರನ್ನು, ಬಿಜೆಪಿ ಸೇರ್ಪಡೆ ಗಳಿಸಿತ್ತು. ಈಗ ಹರಿಕೃಷ್ಣ ಬಂಟ್ವಾಳ ಅವರ ಪಕ್ಷ ಸೇರ್ಪಡೆಯಾಗುವ ಮೊದಲ ಸುತ್ತು ಮುಗಿದಿದೆ ಎಂದು ಲೇವಡಿ ಮಾಡಿದರು.